ಅಸ್ಸಾಂನಲ್ಲಿ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇದೀಗ ಇಸ್ಲಾಮಿಕ್ ಸೆಕ್ಯೂರಿಟಿ ಫೋರ್ಸ್-ಇಂಡಿಯನ್ ಮುಜಾಹಿದೀನ್ (ಐಎಸ್‌ಎಫ್-ಐಎಂ) ಸಂಘಟನೆ ಹೊತ್ತುಕೊಂಡಿದೆ.
ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿದ್ದು, ಹಲವಾರು ಜನರು ಗಾಯಗೊಂಡಿದ್ದು, ಸ್ಫೋಟ ಕೃತ್ಯದ ಹಿಂದೆ ಉಲ್ಫಾ ಇಲ್ಲವೇ ಹುಜಿ ಸಂಘಟನೆಯ ಕೈವಾಡ ಇದ್ದಿರಬಹುದು ಎಂದು ಪೊಲೀಸ್ ಇಲಾಖೆ ಶಂಕಿಸಿತ್ತು.
ನಾವು ಐಎಸ್ಎಫ್-ಐಎಂ ಸಂಘಟನೆ ಈ ಸ್ಫೋಟ ಹೊಣೆಯನ್ನು ಹೊತ್ತಿದ್ದೇವೆ. ಈಗಾಗಲೇ ಅಸ್ಸಾಂ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದ್ದೇವು. ಆ ನಿಟ್ಟಿನಲ್ಲಿ ನಾವು ನಮ್ಮ ಸಂಘಟನೆ ಜನರನ್ನು ಅಭಿನಂದಿಸುತ್ತೇವೆ. ಅಮೇನ್ ಎಂಬ ಎಸ್ಎಂಎಸ್ ಸಂದೇಶವನ್ನು ನ್ಯೂಸ್ ಲೈವ್ ದೂರದರ್ಶನ ಚಾನೆಲ್‌ಗೆ ಕಳುಹಿಸಿದೆ.
ನ್ಯೂಸ್ ಚಾನೆಲ್‌ನ ರಿಲಯನ್ಸ್ ಸಂಪರ್ಕದ ಮೊಬೈಲ್‌ಗೆ ಈ ಸಂದೇಶವನ್ನು ರವಾನಿಸಲಾಗಿತ್ತು. ಸಂದೇಶದ ಬಳಿಕ ಸೆಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಲಾಗಿತ್ತು.
ಆದರೆ ಸೆಕ್ಯುರಿಟಿ ಪಡೆ ಕೂಡಲೇ ಕಾರ್ಯಪ್ರವೃತ್ತರಾಗಿ, ಸಂದೇಶವನ್ನು ಟ್ರೇಸ್ ಮಾಡಿದ್ದು, ಆ ಸಂದೇಶ ಸೆಂಟ್ರಲ್ ಅಸ್ಸಾಂನ ನಾಗಾಂವ್ ಜಿಲ್ಲೆಯ ನಾಜೀರ್ ಅಹಮದ್ ಹೆಸರಿನ ಸೆಲ್‌ನಿಂದ ಬಂದಿರುವುದಾಗಿ ತಿಳಿಸಿದೆ. ಬೋಡೋ ಜನಾಂಗ ಪ್ರಾಬಲ್ಯವುಳ್ಳ ಪ್ರದೇಶದಲ್ಲಿ 2000ದಲ್ಲಿ ಐಎಸ್ಎಫ್-ಐಎಂ ಸಂಘಟನೆ ಹುಟ್ಟಿಕೊಂಡಿರುವುದಾಗಿ ಪಿಟಿಐ ವರದಿ ತಿಳಿಸಿದೆ. |