ತನ್ನ ಜಪಾನ್ ತಂದೆಯೊಂದಿಗೆ ಜಪಾನ್‌ಗೆ ತೆರಳಲು ಕಾನೂನು ತೊಡಕನ್ನು ಎದುರಿಸಿದ್ದ, ಹಸುಳೆ ಮಂಜಿ, ಈಗ ತನ್ನ ಅಜ್ಜಿಯೊಂದಿಗೆ ಜಪಾನ್‌ಗೆ ಹಾರಲು ಸನ್ನದ್ಧಳಾಗಿದ್ದಾಳೆ.
ಮಗುವಿನ ಅಜ್ಜಿ(ತಂದೆಯ ತಾಯಿ), 74ರ ಇಳಿಹರೆಯದ ಎಮಿಕೊ ಯಮಡ ಅವರು, ಮಗುವಿಗೆ ಜಪಾನಿ ರಾಷ್ಟ್ರೀಯತೆಗಾಗಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮೇಲೆ ಯಾವುದೇ ಪ್ರತಿಬಂಧವನ್ನೊಡ್ಡಲು ಇಚ್ಚಿಸುವುದಿಲ್ಲ ಎಂದು ಹೇಳಿರುವ ಯಮಡಾ, "ಮಗುವಿಗೆ ಯಾವುದೇ ರಾಷ್ಟ್ರೀಯತೆಗಾಗಿ ಅರ್ಜಿ ಸಲ್ಲಿಸುವುದಿಲ್ಲ. ಮಗು ಜೀವನ ಪರ್ಯಂತ ಜಪಾನಿ ವೀಸದಲ್ಲಿ ನೆಲೆಸಬಹುದು" ಎಂದು ಹೇಳಿದ್ದಾರೆ.
ಜಪಾನಿ ತಂದೆ ತಾಯಿಯರಿಗಾಗಿ ಬಾಡಿಗೆ ತಾಯಿ ಹೆತ್ತ ಮಗು ಇದು. ಮಗು ಹುಟ್ಟುವಷ್ಟರಲ್ಲಿ ಅಪ್ಪ-ಅಮ್ಮ ವಿಚ್ಚೇದನ ಪಡೆದಿದ್ದರು.
ಇತ್ತ ಬಾಡಿಗೆ ತಾಯಿಯೂ ಮಗುವನ್ನು ದೂರಮಾಡಿದ್ದಳು. ಮಗುವನ್ನು ಜಪಾನಿಗೆ ಕರೆದೊಯ್ಯಲು ಕಾನೂನು ತೊಡಕುಗಳು ಅಡ್ಡಿಯಾಗಿದ್ದವು. ಇದೀಗ ಮಗು ತನ್ನ ಅಜ್ಜಿಯ ಸುಪರ್ದಿಯಲ್ಲಿದೆ. |