ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಮತ್ತು ಸಮೀರ್ ಕುಲಕರ್ಣಿ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿರುವ ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆ, ಇವರ ಸಹಾಯಕ್ಕೆ ಇಡಿಯ ಹಿಂದೂ ಸಮುದಾಯ ಧಾವಿಸಬೇಕು ಎಂದು ಹೇಳಿದ್ದಾರೆ. ಶಿವಸೇನಾದ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ತನ್ನ ಎಂದಿನ ಉರಿಉರಿ ಸಂಪಾದಕೀಯ ಬರೆದಿರುವ ಸೇನಾ ಮುಖ್ಯಸ್ಥ, ರಾಷ್ಟ್ರವನ್ನು ದುರ್ಬಲಗೊಳಿಸುವ ಯಾವುದೇ ಭಯೋತ್ಪಾದನೆಯನ್ನು ತಾನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದು, ಮಾಲೆಗಾಂವ್ ಸ್ಫೋಟದಲ್ಲಿ ಸಾವನ್ನಪ್ಪಿರುವವರಿಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.ಆದರೆ, ಡೋಂಗಿ ಜಾತ್ಯತೀತವಾದಿಗಳು ಸಂಸತ್ ಮೇಲೆ ದಾಳಿ ನಡೆಸಿರುವಂತಹ ಅಪ್ಜಲ್ ಗುರುವನ್ನು ಬೆಂಬಲಿಸುತ್ತಾರೆಂದಾದರೆ, ಸಾಧ್ವಿ ಪ್ರಗ್ಯಾ, ರಮೇಶ್ ಉಪಾಧ್ಯಾಯ ಮತ್ತು ಸಮೀರ್ ಕುರಕರ್ಣಿ ಅವರನ್ನು ನಾವ್ಯಾಕೆ ಪ್ರೀತಿಸಬಾರದು ಮತ್ತು ಬೆಂಬಲಿಸಬಾರದು ಎಂದು ಅವರು ಪತ್ರಿಕೆಯ ಸಂಪಾದಕೀಯದಲ್ಲಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ." ಭಾರತದಲ್ಲಿ ಪ್ರತಿದಿನ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂಗಳನ್ನು ಕೊಲ್ಲಲು ಬಾಂಬ್‌ಗಳನ್ನು ಇರಿಸುತ್ತಾರೆ. ಅಸ್ಸಾಂನಲ್ಲಿ ನಡೆದ ಇತ್ತೀಚಿನ ಬಾಂಬ್ ಸ್ಫೋಟವನ್ನೂ ಬಾಂಗ್ಲಾದೇಶದ ವಲಸಿಗರು ನಡೆಸಿದ್ದಾರೆ. ಸಾಧ್ವಿ ಪ್ರಗ್ಯಾ, ರಮೇಶ್ ಉಪಾಧ್ಯಾಯ ಮತ್ತು ಸಮೀರ್ ಕುಲಕರ್ಣಿ ಅವರುಗಳು ಪ್ರಸಕ್ತ ಜಮಾನದಲ್ಲಿ ಜನಿಸಿದ್ದರೆ, ಅವರುಗಳನ್ನು ದೂಷಿಸಬಾರದು" ಎಂದು ಹೇಳಿದ್ದಾರೆ. " ಮುಸ್ಲಿಂ ತುಷ್ಟಿಕರಣದಲ್ಲಿ ನಿರತವಾಗಿರುವ ಕಾಂಗ್ರೆಸ್, ಭಯೋತ್ಪಾದನಾ ನಿಗ್ರಹ ದಳವನ್ನು ತನ್ನ ಇಚ್ಚೆಗೆ ಅನುಸಾರ ಬಳಸುತ್ತಿದೆ" ಎಂದು ಆಪಾದಿಸಿರುವ ಹಿರಿಯ ಠಾಕ್ರೆ, ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸುಸಂಸ್ಕೃತ ಮತ್ತು ಸುಶಿಕ್ಷಿತ ವ್ಯಕ್ತಿಗಳನ್ನು ಬಂಧಿಸಿರುವುದು ಹಿಂದುಗಳನ್ನು ದಮನಿಸಿ ಮೂಲಭೂತವಾದಿ ಮುಸ್ಲಿಮರನ್ನು ಸಂತುಷ್ಟಗೊಳಿಸಲು ಎಂದಿದ್ದಾರೆ." ಭೂಗತದೊರೆ ದಾವೂದ್ ಇಬ್ರಾಹಿಂನನ್ನು ಸಮರ್ಥಿಸಿಕೊಳ್ಳಲು ಮಜೀದ್ ಮೆಮನ್ ಎಂಬಾತ ಕರಿಕೋಟು ತೊಡುತ್ತಾನೆಂದಾದರೆ, ಪ್ರಗ್ಯಾ, ಉಪಾಧ್ಯಾಯ ಮತ್ತು ಕುಲಕರ್ಣಿಯವರನ್ನು ಸಮರ್ಥಿಸಿಕೊಳ್ಳಲು ಇನ್ನೊಂದು ಮೆಮನ್‌ನನ್ನು ನಿರೀಕ್ಷಿಸೋಣವೇ?" ಎಂಬ ಪ್ರಶ್ನೆಯೊಂದಿಗೆ ಸಾಮ್ನಾ ಸಂಪಾದಕೀಯ ಕೊನೆಗೊಂಡಿದೆ. |
|