ಸುಮಾರು 77 ಮಂದಿಯನ್ನು ಆಹುತಿ ತೆಗೆದುಕೊಂಡಿರುವ ಅಸ್ಸಾಂ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಂಧಿತರಿಬ್ಬರ ವಾಹನಗಳನ್ನು ಗುರುವಾರ ನಡೆಸಲಾಗಿರುವ 13 ಸರಣಿ ಸ್ಫೋಟಗಳಲ್ಲಿ, ಎರಡು ಸ್ಫೋಟಗಳಿಗೆ ಬಳಸಲಾಗಿತ್ತು ಎಂದು ಶಂಕಿಸಿರುವುದಾಗಿ ಅಸ್ಸಾಂ ಐಜಿಪಿ ಜ್ಯೋತಿ ಮಹಂತ ತಿಳಿಸಿದ್ದಾರೆ.
ಅಲ್ಲದೆ, ಸ್ಫೋಟದ ಜವಾಬ್ದಾರಿ ವಹಿಸಿಕೊಂಡು ಸ್ಥಳೀಯ ವಾಹಿನಿ ನ್ಯೂಸ್ ಲೈವ್‌ಗೆ ಎಸ್ಎಂಎಸ್ ಸಂದೇಶ ಕಳುಹಿಸಲು ನಜೀರ್ ಅಹ್ಮದ್ ಎಂಬಾತನ ಮೊಬೈಲ್ ಬಳಸಲಾಗಿದೆ ಎನ್ನಲಾಗಿದ್ದು ಆತನೂ ಬಂಧನಕ್ಕೀಡಾಗಿದ್ದಾನೆ ಎಂದು ಮಹಾಂತ ತಿಳಿಸಿದ್ದಾರೆ.
ಇಸ್ಲಾಮಿಕ್ ಸೆಕ್ಯುರಿಟಿ ಫೋರ್ಸ್ (ಇಂಡಿಯನ್ ಮುಜಾಹಿದ್ದೀನ್) ಎಂದು ಕರೆದುಕೊಂಡಿರುವ ಸಂಘಟನೆಯು, ಈ ಸಂದೇಶದಲ್ಲಿ ತನ್ನ ಇತರ ಪಾಲುದಾರರಿಗೆ ವಂದನೆಗಳನ್ನು ಸಲ್ಲಿಸಿದ್ದು, ಭವಿಷ್ಯದಲ್ಲಿ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಅಸ್ಸಾಮಿನ ಮುಸ್ಲಿಮರ ಮೇಲೆ ಬೋಡೋ ಬುಡಕಟ್ಟು ಜನತೆಯ ದಾಳಿಯನ್ನು ತಪ್ಪಿಸಲು ಈ ಸಂಘಟನೆಯು 2000ದಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ತನಿಖೆಯ ನೇತೃತ್ವ ವಹಿಸಿರುವ ಇನ್ನೋರ್ವ ಐಜಿಪಿ ಚಂದ್ರನಾಥನ್ ಹೇಳಿದ್ದಾರೆ. |