ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ವಿಧಿವಿಜ್ಞಾನ ಪರೀಕ್ಷೆಗಳ ಸಂದರ್ಭ ಸುಳ್ಳು ಹೇಳಿರಲಿಲ್ಲ ಎಂಬುದು ಆಕೆಯ ಮೇಲೆ ಇಲ್ಲಿನ ಫೋರೆನ್ಸಿಕ್ ಪ್ರಯೋಗಾಲಯದಲ್ಲಿ ನಡೆಸಿದ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಸಂದರ್ಭ ಖಚಿತವಾಗಿದೆ.
ಇದೀಗ ಪೊಲೀಸರು ಆಕೆಯನ್ನು ಮತ್ತೊಂದು ಸುತ್ತಿನ ವಿಧಿವಿಜ್ಞಾನ ಪ್ರಯೋಗಕ್ಕೆ ಒಳಪಡಿಸಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಾರದ ಆರಂಭದಲ್ಲಿ ಸಾಧ್ವಿಯನ್ನು ಪೊಲೀಸರು ನಾಗಪಾಡಾದಲ್ಲಿರುವ ಆಸ್ಪತ್ರೆಯಲ್ಲಿಯೂ ಮಂಪರು ಪರೀಕ್ಷೆಗೆ ಒಳಪಡಿಸಿದ್ದು, ಅದರ ಫಲಿತಾಂಶ ಏನೆಂಬುದು ತಿಳಿದಿಲ್ಲ.
ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಘಟಕ 'ದುರ್ಗಾ ವಾಹಿನಿ' ಸಂಘಟನೆಯ ಮಾಜಿ ಸದಸ್ಯೆಯಾಗಿರುವ ಠಾಕೂರ್‌ಗಳನ್ನು 10 ದಿನಗಳ ಕಾಲ ವಿಚಾರಣೆಗೊಳಪಡಿಸಿದ ಬಳಿಕ ಅಕ್ಟೋಬರ್ 23ರಂದು ಬಂಧಿಸಲಾಗಿತ್ತು. ಮಾಲೆಂಗಾವ್‌ನಲ್ಲಿ ಬೈಕ್ ಮೇಲಿರಿಸಲಾಗಿದ್ದ ಬಾಂಬೊಂದು ಸಿಡಿದು 6 ಮಂದಿ ಸಾವನ್ನಪಪ್ಪಿದ್ದರು. ಈ ಬೈಕು ಸಾಧ್ವಿಯ ಹೆಸರಿನಲ್ಲಿ ನೋಂದಾವಣೆಯಾಗಿತ್ತು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ನಿವೃತ್ತ ಮೇಜರ್ ಸೇರಿದಂತೆ ಇತರ ನಾಲ್ವರನ್ನೂ ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಅವರನ್ನೂ ಹಲವಾರು ಪರೀಕ್ಷೆಗಳಿಗೆ ಗುರಿಪಡಿಸಲಾಗಿದೆ.
ಮಂಪರು ಪರೀಕ್ಷೆಯ ವರದಿಯನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಮಂಡಿಸುವಂತಿಲ್ಲವಾದರೂ, ಬ್ರೈನ್ ಮ್ಯಾಪಿಂಗ್ ಪರೀಕ್ಷೆಯು ನ್ಯಾಯಾಲಯದಲ್ಲಿ ಸ್ವೀಕಾರಯೋಗ್ಯ. ಸಾಧ್ವಿಯ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯನ್ನು ಸುಮಾರು ಎರಡು ಗಂಟೆ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಜುಲೈ 11ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಫೋರೆನ್ಸಿಕ್ ತಪಾಸಣೆಗೆ ಒಳಪಡಿಸಿದಾಗ ಮೊದಲ ಬಾರಿ ಅವರಿಗೆ ಯಾವುದೇ ಧನಾತ್ಮಕ ಫಲಿತಾಂಶ ಕಂಡುಬಂದಿರಲಿಲ್ಲ. ಎರಡನೇ ಬಾರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ ತಪಾಸಣೆ ಮಾಡಿದಾಗ, ಅದರ ಆಧಾರದಲ್ಲಿ ಅವರು ತನಿಖೆ ಕೈಗೊಂಡು ಯಶಸ್ಸು ಸಾಧಿಸಿರುವುದು ಇಲ್ಲಿ ಉಲ್ಲೇಖಾರ್ಹ. |