ವಲಸಿಗರ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಡೆಸುತ್ತಿದ್ದ ಕದನ ಇದೀಗ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆ ಹತ್ಯೆಗೆ ರಾಜಕಾರಣಿಯೊಬ್ಬರು 1 ಕೋಟಿ ರೂ.ಸುಪಾರಿ ನೀಡಿರುವುದಾಗಿ ವಕ್ತಾರ ಶಿರೀಷ್ ಪಾರ್ಕರ್ ಶನಿವಾರ ತಿಳಿಸಿದ್ದಾರೆ.ಮುಂಬೈಯಲ್ಲಿ ಉತ್ತರ ಭಾರತೀಯವರ ವಿರುದ್ಧ ನಡೆಸುತ್ತಿರುವ ದಾಳಿ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ರಾಜಕಾರಣಿಯೊಬ್ಬರು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಹತ್ಯೆಗೈಯುವಂತೆ ಒಂದು ಕೋಟಿ ರೂಪಾಯಿಯ ಸುಪಾರಿ ನೀಡಿರುವುದಾಗಿ ಅವರು ಗಂಭೀರವಾಗಿ ಆರೋಪಿಸಿದ್ದಾರೆ.ತಮ್ಮ ಸ್ವಾಧೀನ ಇರುವ ಸಿಡಿಯೊಂದು ಈ ಮಾಹಿತಿಯನ್ನು ಖಚಿತಪಡಿಸಿರುವುದಾಗಿ ಎಂಎನ್ಎಸ್ ಹೇಳಿಕೊಂಡಿದ್ದು, ಆ ನಿಟ್ಟಿನಲ್ಲಿ ರಾಜ್ ಠಾಕ್ರೆ ಅವರಿಗೆ ಪೂರ್ಣ ಪ್ರಮಾಣದಲ್ಲಿ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದೆ.ನಾವು ವಲಸಿಗರು ಮಹಾರಾಷ್ಟ್ರದೊಳಗೆ ಪ್ರವೇಶಿಸುವುದಕ್ಕೆ ಈಗಲೂ ವಿರೋಧವಿರುವುದಾಗಿ ರಾಜ್ ಶುಕ್ರವಾರ ಪುನರುಚ್ಚರಿಸಿದ್ದು, ಹಾಗೆಯೇ ಮರಾಠಿ ಭಾಷೆಯ ಮೇಲೆ ಸವಾರಿ ಮಾಡುವುದನ್ನು ತಾವು ಸಹಿಸುವುದಿಲ್ಲ, ನೀವು ಕೂಡ ಮರಾಠಿಯನ್ನು ಕಲಿತುಕೊಳ್ಳಿ ಎಂದು ತಾಕೀತು ಮಾಡಿದ್ದರು.ಹಾಗಂತ ಉತ್ತರಭಾರತೀಯರು ಆಚರಿಸುವ ಛಾತ್ ಪೂಜೆಯನ್ನು ನಾನು ವಿರೋಧಿಸುವುದಿಲ್ಲ, ಯಾವುದೇ ಧಾರ್ಮಿಕ ವಿಧಿ-ವಿಧಾನ, ಆಚರಣೆಗೆ ತನ್ನ ವಿರೋಧಿವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.ಆದರೆ ಉತ್ತರಭಾರತದ ರಾಜಕಾರಣಿಗಳು ಛಾತ್ ಪೂಜೆಯಲ್ಲಿಯೂ ರಾಜಕೀಯ ಪಿತೂರಿ ಮಾಡುತ್ತಿರುವುದು ಸರಿಯಲ್ಲ ಎಂದಿರುವ ಅವರು, ಹಾಗೇ ರಾಜಕೀಯ ಮಾಡಿದರೆ ಎಚ್ಚರ ಎಂಬುದಾಗಿ ಹೇಳಿದ್ದರು. |
|