ಯುಪಿಎ ಸರಕಾರವು ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ತಾಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಶನಿವಾರ ಅಲ್ಲಗಳೆದಿದ್ದಾರೆ.
"ನಾವೇನೂ ಉಗ್ರವಾದದ ಬಗ್ಗೆ ಮೃದು ನೀತಿ ಅನುಸರಿಸುತ್ತಿಲ್ಲ. ಭಯೋತ್ಪಾದನೆ ಜೊತೆಗೆ ಯಾವುದೇ ರಾಜಿ ಇಲ್ಲ" ಎಂದು ಇದುವರೆಗೆ 81 ಮಂದಿಯನ್ನು ಬಲಿತೆಗೆದುಕೊಂಡ ಬಾಂಬ್ ಸ್ಫೋಟ ಸಂಭವಿಸಿದ ಅಸ್ಸಾಂನ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ತಿಳಿಸಿದರು.
ಈ ರಣಹೇಡಿ ಕೃತ್ಯಕ್ಕೆ ಕಾರಣರಾದವರು ಯಾರೇ ಇರಲಿ, ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ ಅವರು, ಬೇರೆ ಯಾವುದೇ ಸರಕಾರಗಳು ಕೂಡ ಇದರಲ್ಲಿ ಭಾಗಿಯಾಗಿದ್ದರೆ, ನಾವದನ್ನು ಅವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಲಭ್ಯವಾದ ಎಲ್ಲ ಸುಳಿವುಗಳ ಬಗ್ಗೆ ತನಿಖಾ ತಂಡಗಳು ಪರಾಮರ್ಶೆ ನಡೆಸಲಿವೆ. ತನಿಖೆ ಬಗ್ಗೆ ಹೇಳಿಕೆ ನೀಡುವುದು ಈಗ ಸರಿಯಾಗದು ಎಂದು ಅವರು ಹೇಳಿದರು. |