ಪಾಕಿಸ್ತಾನ ಎದುರಿಸುತ್ತಿರುವ ಶಾಂತಿ, ಅಭಿವೃದ್ಧಿ ಮತ್ತು ಸ್ಥಿರತೆಯ ಸಮಸ್ಯೆಯನ್ನು ಹೋಗಲಾಡಿಸಲು ಭಾರತ ಬಯಸುತ್ತಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿನ ಶಾಂತಿ, ಅಭಿವೃದ್ಧಿಯು ನೆರೆಯ ರಾಷ್ಟ್ರದ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುವುದರಿಂದ ಪಾಕಿಸ್ತಾನದಲ್ಲಿನ ಅಭಿವೃದ್ಧಿಯನ್ನು ಭಾರತ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.ಟೆಹ್ರಾನ್‌ನಲ್ಲಿ 'ಭಾರತ ಮತ್ತು ಇರಾನ್: ಪ್ರಾಚೀನ ಸಂಸ್ಕೃತಿಗಳು ಮತ್ತು ಆಧುನಿಕ ರಾಷ್ಟ್ರಗಳು' ಎಂಬ ವಿಷಯದ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು." ಭಾರತದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ನವದೆಹಲಿ ಬಯಸುತ್ತಿದೆ" ಎಂದು ಮುಖರ್ಜಿ ನುಡಿದರು.ಭಯೋತ್ಪಾದನೆಯು ಜಾಗತಿಕ ಶಾಂತಿಯ ಮೇಲಿರುವ ಬಹಳ ಗಂಭೀರ ಭೀತಿಗಳಲ್ಲಿ ಒಂದಾಗಿದೆ ಎಂದು ಮುಖರ್ಜಿ ನುಡಿದರು.ಕಾಬುಲ್ ರಾಯಭಾರಿ ಕಚೇರಿ ಮೇಲಿನ ದಾಳಿಯನ್ನು ಪ್ರಸ್ತಾಪಿಸಿದ ಅವರು, "ಧರ್ಮದ ಪರವಾಗಿ ಭಯೋತ್ಪಾದಕರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಸತ್ಯ ಏನೆಂದರೆ, ಅವರಿಗೆ ಧರ್ಮವಿಲ್ಲ. ಧರ್ಮದ ಸಾರಾಂಶವೇನೆಂದರೆ, ಶಾಂತಿ, ಮತ್ತು ವಿಶ್ವ ಭ್ರಾತೃತ್ವತೆಯೇ ಹೊರತು ಹಿಂಸೆಯಲ್ಲ" ಎಂದು ಅವರು ನುಡಿದರು.ಇರಾನ್-ಪಾಕಿಸ್ತಾನ-ಭಾರತವನ್ನೊಳಗೊಂಡ 7.4 ಶತಕೋಟಿ ಡಾಲರ್ ವೆಚ್ಚದ ಅನಿಲ ಕೊಳವೆ ಯೋಜನೆ ಹಾಗೂ ಭಾರತ-ಇರಾನ್ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಮುಖರ್ಜಿ ಇರಾನ್‌ಗೆ ಆಗಮಿಸಿದ್ದಾರೆ. |
|