ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಅಫ್ಜಲ್ ಗುರುವನ್ನು ಕಾಂಗ್ರೆಸ್ ರಕ್ಷಿಸುತ್ತಿದೆ ಎಂಬ ಬಿಜೆಪಿಯ ಪ್ರಚಾರವನ್ನು ತಡೆಯಲು ಮುಂದಾಗಿರುವ ಕಾಂಗ್ರೆಸ್, ಭಾನುವಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ತನಗೆ ಭಯೋತ್ಪಾದಕರ ಮೇಲೆ ಯಾವುದೇ ಕರುಣೆ ಇಲ್ಲ ಎಂದಿದೆ.
"ಕಾಂಗ್ರೆಸ್ ಉಗ್ರರ ಮೇಲೆ ಕರುಣೆ ಹೊಂದಿಲ್ಲ. ಅಫ್ಜಲ್‌ನನ್ನು ಗಲ್ಲಿಗೇರಿಸಬೇಕು. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ಎಂದಿಗೂ ಅಫ್ಜಲ್ ಇಲ್ಲವೇ ಯಾವುದೇ ಭಯೋತ್ಪಾದನಾ ಕೃತ್ಯಗಳನ್ನು ಬೆಂಬಲಿಸಿಲ್ಲ. ನಾವು ಭಯೋತ್ಪಾದನೆಯ ಬಗ್ಗೆ ಮೆದು ಧೋರಣೆ ತಳೆದಿದ್ದೇವೆಂದು ನಮ್ಮಮೇಲೆ ತಪ್ಪು ಆಪಾದನೆ ಹೊರಿಸಲಾಗುತ್ತಿದೆ. ಅಫ್ಜಲ್ ಗುರು ತಪ್ಪಿತಸ್ಥನೆಂದು ಕಂಡುಬಂದಿದ್ದು, ರಾಷ್ಟ್ರಪತಿಗಳ ಮುಂದಿರುವ ಆತನ ಕ್ಷಮಾಯಾಚನಾ ಮನವಿಯು ಪ್ರಕ್ರಿಯೆಯಲ್ಲಿದೆ ಎಂದು ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಸಿಂಗ್, ಸಂಘಪರಿವಾರದ ಮೇಲೆ ವಾಗ್ದಾಳಿ ನಡೆಸಿದ್ದು, "ಯಾವಾಗೆಲ್ಲ ಬಿಜೆಪಿ ಸಮಸ್ಯೆಯನ್ನು ಎದುರಿಸುತ್ತಿದೆಯೋ, ಆವಾಗೆಲ್ಲ ಸ್ಫೋಟಗಳು ಸಂಭವಿಸಿವೆ. ಸಾಧ್ವಿ ಪ್ರಗ್ಯಾ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿಯು ಮುಜುಗರಕ್ಕೀಡಾಗಿರುವ ಸಂದರ್ಭದಲ್ಲೇ ಇತ್ತೀಚಿನ ಅಸ್ಸಾಂ ಸ್ಫೋಟ ಸಂಭವಿಸಿದೆ. ಬಿಜೆಪಿಗೆ ಜನತೆಯ ಗಮನವನ್ನು ಬೇರೆಡೆಗೆ ಹರಿಸುವ ಅಗತ್ಯವಿದೆ. ನಾನು ಈ ವಿಲಕ್ಷಣ ಕಾಕತಾಳೀಯತೆಯ ಬಗ್ಗೆ ಗಮನ ಸೆಳೆಯುತ್ತೇನಷ್ಟೆ" ಎಂದು ನುಡಿದರು.
"ಬಿಜೆಪಿ ವಿರುದ್ಧ ತೆಹೆಲ್ಕಾ ನಡೆಸಿದ ಮೊದಲ ಕುಟುಕು ಕಾರ್ಯಾಚರಣೆ ವೇಳೆ ಸಂಸತ್ತಿನ ಮೇಲೆ ದಾಳಿ ನಡೆಸಲಾಗಿದೆ. ಯಾವಾಗೆಲ್ಲ ಚುನಾವಣೆಗಳು ಇರುತ್ತವೋ ಆವಾಗ ಸ್ಫೋಟಗಳು ಸಂಭವಿಸುತ್ತವೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರಬೇಕಾದರೆ, ಹುಬ್ಬಳ್ಳಿಯಲ್ಲಿ ಸ್ಫೋಟ ಸಂಭವಿಸಿತು. ಎರಡನೇ ಹಂತದ ಚುನಾವಣೆ ವೇಳೆ ಜೈಪುರದಲ್ಲಿ ಸ್ಫೋಟ ಸಂಭವಿಸಿತು" ಎಂದು ದಿಗ್ವಿಜಯ್ ಸಿಂಗ್ ನುಡಿದರು.
ಮಾಲೆಗಾಂವ್ ಸ್ಫೋಟ ಆರೋಪಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರ ಎನ್‌ಜಿಓಗಳಿಗೆ ನಿಧಿ ಲಭ್ಯತೆ ಕುರಿತು ತನಿಖೆ ನಡೆಸಲು ಅವರು ಒತ್ತಾಯಿಸಿದರು. ಸಾಧ್ವಿಯ ಎನ್‌ಜಿಓಗಳಿಗೆ ಗುಜರಾತ್ ಸರಕಾರ ನಿಧಿ ಒದಗಿಸುತ್ತದೆ ಎಂದು ಅವರು ಆರೋಪಿಸಿದರಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಮಸೀದಿಗಳ ಸಮೀಪ ನಡೆಸಲಾಗಿರುವ ಸ್ಫೋಟಗಳು ಮತ್ತು ಮುಸ್ಲಿಮರು ಸಾವನ್ನಪ್ಪಿರುವ ಕುರಿತು ಹೊಸ ತನಿಖೆಯನ್ನು ನಡೆಸಬೇಕು ಎಂದು ಅವರು ನುಡಿದರು.
ಪ್ರಗ್ಯಾ ಕುಟುಂಬವು ಯಾಕೆ ಮಧ್ಯಪ್ರದೇಶದಿಂದ ಸೂರತ್‌ಗೆ ತೆರಳಿದೆ ಎಂಬುದರ ಕುರಿತೂ ತನಿಖೆಯಾಗಬೇಕು ಮತ್ತು ಅಹಮದಾಬಾದ್ ಸ್ಫೋಟಗಳ ಬಳಿಕ ಅಲ್ಲಿ ಬಾಂಬ್‌ಗಳು ಹೇಗೆ ಪತ್ತೆಯಾದವು ಎಂಬ ಕುರಿತೂ ತನಿಖೆಯಾಗಬೇಕು ಎಂದು ಆವರು ಒತ್ತಾಯಿಸಿದರು.
ಈ ವರ್ಷದ ಆದಿಯಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪ್ರಚಾರದ ಉಸ್ತುವಾರಿ ವಹಿಸಿದ್ದ ಸಿಂಗ್, ಪ್ರಗ್ಯಾ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ನರೇಂದ್ರ ಮೋದಿ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
|