ಅಸ್ಸಾಂ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾನುವಾರ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಐದಕ್ಕೇರಿದೆ.
ಬಂಧಿತ ವ್ಯಕ್ತಿಗಳು ನೀಡಿರುವ ಮಾಹಿತಿಯನ್ವಯ ಮುಜಾಮುಲ್ ಹಕ್ ಮತ್ತು ಅನ್ವರುಲ್ ಹಕ್ ಅವರುಗಳನ್ನು ಲಖಿಮ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಕಾರು ಕಳ್ಳತನ ಜಾಲದಲ್ಲಿ ಸಿಲುಕಿದ್ದು, ವಾಹನಗಳ ಮಾಲಕರ ಹೆಸರನ್ನು ನಕಲೀಕರಣಗೊಳಿಸುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ. ಈ ಕಾರುಗಳನ್ನು ಗುವಾಹತಿ ಮತ್ತು ಬೊಂಗಾಯ್‌ಗಾಂವ್‌ನಲ್ಲಿ ಸ್ಫೋಟ ನಡೆಸಲು ಬಳಸಲಾಗಿದೆ.
ಅರೋಪಿತರನ್ನು ಪ್ರಶ್ನಿಸಲು ತನಿಖೆಗಾಗಿ ರೂಪಿಸಿರುವ ವಿಶೇಷ ತನಿಖಾ ತಂಡವು ಗುವಾಹತಿಗೆ ಕರೆತಂದಿದೆ.
ಮೂವರು ವ್ಯಕ್ತಿಗಳನ್ನು ಶನಿವಾರ ಬಂಧಿಸಲಾಗಿತ್ತು. ಸ್ಫೋಟ ಕುರಿತು ತನಿಖೆಗಾಗಿ ಹಲವಾರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್ 30ರಂದು ನಡೆಸಲಾಗಿರುವ ಸ್ಫೋಟದಲ್ಲಿ 80ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. |