ಪ್ರಜಾಪ್ರಭುತ್ವವು ಒಬ್ಬನ ಹಕ್ಕನ್ನು ಮಾತ್ರ ಪ್ರತಿಪಾದಿಸಲು ಇರುವುದಲ್ಲ, ಬದಲಾಗಿ ಈ ಮೂಲಕ ಇನ್ನೊಬ್ಬರ ಹಕ್ಕುಗಳನ್ನು ಗೌರವಿಸುವುದೂ ಅಗತ್ಯವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಅವರು ರಾಷ್ಟ್ರದ ಕೆಲವು ಭಾಗಗಳಲ್ಲಿ ತಲೆದೋರಿರುವ ಸಾಮಾಜಿಕ ಅಶಾಂತಿಯ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ಹೊರಗೆಡಹಿದ್ದಾರೆ.
"ನಮ್ಮ ಹಕ್ಕುಗಳು, ನಮ್ಮ ಜವಾಬ್ದಾರಿಗಳು ಮತ್ತು ನಮ್ಮ ವ್ಯಕ್ತಿತ್ವಗಳ ಕುರಿತು ನಾವು ಪ್ರತಿಯೊಬ್ಬರು ಹೆಚ್ಚು ಪ್ರಜ್ಞಾಪೂರ್ವಕವಾಗಿರುವ ಹಂತವನ್ನು ನಾವು ನಮ್ಮ ರಾಷ್ಟ್ರೀಯ ಜೀವನದಲ್ಲಿ ದಾಟುತ್ತಿದ್ದೇವೆ ಆದರೆ ನಾವು ನಮ್ಮ ಜವಾಬ್ದಾರಿಗಳ ಕುರಿತು, ನಮ್ಮ ಸಾಮಾಜಿಕ ಬಾಧ್ಯತೆಗಳ ಮತ್ತು ರಾಷ್ಟ್ರೀಯ ಬದ್ಧತೆಗಳ ಕುರಿತು ನಾವು ನಿಜವಾಗಿ ಮತ್ತು ಸಮಾನವಾಗಿ ಪ್ರಜ್ಞಾಪೂರ್ವಕವಾಗಿಲ್ಲ" ಎಂದು ಅವರು ನುಡಿದರು.
ಕೇಂದ್ರೀಯ ಮಾಹಿತಿ ಆಯೋಗದ ಎರಡು ದಿನಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಾಹಿತಿ ಹಕ್ಕು ಪ್ರಜೆಗಳ ಅಧಿಕಾರದ ಶಕ್ತಿಯುತ ಸಾಧನವಾಗಿದೆ. ಇದು ಪ್ರಜಾಪ್ರಭುತ್ವದ ಪೋಷಣೆಯ ಸೂಚನೆ ಮತ್ತು ಸರಕಾರದ ವಿವಿಧ ಹಂತಗಳಲ್ಲಿ ಜನತೆಯ ಹಕ್ಕಿನ ಪ್ರತಿಪಾದನೆ ಎಂದು ಅವರು ನುಡಿದರು.
"ಪ್ರಜಾಪ್ರಭುತ್ವವು ನಮ್ಮ ವ್ಯಕ್ತಿತ್ವದ ಪ್ರತಿಪಾದನೆ ಮಾತ್ರವಲ್ಲ. ಇದು ಇತರರ ಹಕ್ಕುಗಳನ್ನು ಗೌರವಿಸುವುದೂ ಆಗಿದೆ. ಪ್ರಜಾತಂತ್ರವೆಂದರೆ ಹಕ್ಕುಗಳ ಕುರಿತು ಮಾತ್ರವಲ್ಲ. ಇದು ನಮ್ಮ ಜವಾಬ್ದಾರಿಗಳ ಕುರಿತೂ ಆಗಿದೆ ಎಂಬುದನ್ನು ನಮ್ಮ ಪ್ರಜೆಗಳು ನೆನಪಿನಲ್ಲಿ ಇರಿಸಿಕೊಳ್ಳಬೇಕು" ಎಂದು ಅವರು ರಾಷ್ಟ್ರಾದ್ಯಂತದ ಮಾಹಿತಿ ಆಯುಕ್ತರು ಭಾಗವಹಿಸಿದ್ದ ಎರಡು ದಿನಗಳ ಸಮಾವೇಶದಲ್ಲಿ ಮಾತನಾಡುತ್ತಾ ನುಡಿದರು.
ಪ್ರಜಾಪ್ರಭುತ್ವವು ಅನುಕೂಲಗಳನ್ನು ಪಡೆಯುವುದಕ್ಕೆ ಮಾತ್ರವಲ್ಲ, ರಾಷ್ಟ್ರನಿರ್ಮಾಣದ ಪ್ರಕ್ರಿಯೆಯಲ್ಲಿ ಕೊಡುಗೆ ನೀಡುವುದಕ್ಕೂ ಆಗಿದೆ ಎಂದು ನುಡಿದ ಪ್ರಧಾನಿ ಸಿಂಗ್, ನಾವು ಮಾಹಿತಿ ಹಕ್ಕುಗಳ ಮೂಲಕ ನಮ್ಮ ವೈಯಕ್ತಿಕ ಹಕ್ಕುಗಳನ್ನು ಚಲಾಯಿಸುವ ವೇಳೆ, ನಮ್ಮ ರಾಷ್ಟ್ರೀಯ ಗುರಿಗಳ ಸಾಧನೆಗಾಗಿ ಸಾಮೂಹಿಕ ಹೊಣೆ ಮತ್ತು ಕಾಳಜಿಗಳನ್ನು ತೋರವುದನ್ನು ನಾವು ಮರೆಯಬಾರದು ಎಂದು ನುಡಿದರು.
ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿರುವುದು ತಮ್ಮ ಸರಕಾರಕ್ಕೆ ಬಹುದೊಡ್ಡ ಹೆಮ್ಮೆ ಎಂದಿರುವ ಅವರು ಪಾರದರ್ಶಕತೆ ಮತ್ತು ಉತ್ತರದಾಯಿ ಸರಕಾರದ ಒತ್ತಾಯಕ್ಕಾಗಿ ಸಾಮಾನ್ಯ ಜನತೆಯ ಕೈಗೆ ಬೃಹತ್ ಶಕ್ತಿಯನ್ನು ಮಾಹಿತಿ ಹಕ್ಕಿನ ಕ್ರಾಂತಿಕಾರಿ ಜಾರಿಯು ನೀಡಿದೆ ಎಂದು ನುಡಿದರು. |