ಕೇಂದ್ರ ಉಕ್ಕುಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ವಿಸ್ತರಿತ ಭದ್ರತೆಯನ್ನು ಒದಗಿಸುವುದಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.
ನಕ್ಸಲ್ ಬಾಹುಳ್ಯ ಪ್ರಾಂತ್ಯವಾಗಿರುವ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರದಲ್ಲಿ ಪಾಸ್ವಾನ್ ಅವರು ಪ್ರಯಾಣಿಸುತ್ತಿದ್ದ ವಾಹನ ಹಾದುಹೋಗುವ ವೇಳೆ ನೆಲಬಾಂಬ್ ಸ್ಫೋಟಿಸಿದ್ದು ಅವರು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಸ್ವಲ್ಪದರಲ್ಲೇ ಪಾರಾಗಿದ್ದರು.
ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದು, ಪಾಸ್ವಾನ್ ಅವರ ಭದ್ರತಾ ವಾಹನವು ಹಾನಿಗೊಳಗಾಗಿದೆ. ಸ್ಫೋಟದ ಕುರಿತು ತನಿಖೆಗೆ ಬುದ್ದದೇವ್ ಆದೇಶಿಸಿದ್ದಾರೆ.
ಪಾಸ್ವಾನ್ ಅವರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದ್ದು, ಅವರ ಭದ್ರತೆಯನ್ನು ವಿಸ್ತರಿಸುವಂತೆ ಸಂಬಂಧಿತ ಸಚಿವಾಲಯದೊಂದಿಗೆ ಮಾತನಾಡುವುದಾಗಿ ಭರವಸೆ ಇತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಭದ್ರತೆಯನ್ನು ವಿಸ್ತರಿಸುವುದಾಗಿ ಪ್ರಧಾನಿ ಭರವಸೆ ಇತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದೊಂದು ಬಾಂಬ್ ಸ್ಫೋಟವೆಂದು ತಿಳಿದ ಬಳಿಕ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿರುವುದಾಗಿಯೂ ಅವರು ನುಡಿದರು.
ಎಂಟು ಮಂದಿ ಬಂಧನ ಶಂಕಿತ ನಕ್ಸಲರು ಶಕ್ತಿಶಾಲಿ ಸ್ಫೋಟ ನಡೆಸಿರುವ ಮರುದಿನವಾದ ಸೋಮವಾರ ಎಂಟು ಮಂದಿಯನ್ನು ಬಂಧಿಸಲಾಗಿದೆ. ಭದುತಲ ಮತ್ತು ಇತರ ಕೆಲವು ಗ್ರಾಮಗಳಲ್ಲಿ ಆಹೋರಾತ್ರಿ ಕಾರ್ಯಚರಣೆ ನಡೆಸಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ ಮತ್ತು ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಐಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ರಾಜ್ ಕನೋಜಿಯಾ ವರದಿಗಾರರಿಗೆ ತಿಳಿಸಿದ್ದಾರೆ.
ಅಲ್ಲದೆ ಪಶ್ಚಿಮ ವಲಯದ ಐಜಿ ಕುಲ್‌ದೀಪ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಫಾರೆನ್ಸಿಕ್ ತಜ್ಞರು ಸ್ಫೋಟ ಸ್ಥಳದಿಂದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಬಾಂಬ್ ಸಿಡಿದ ಜಾಗದಲ್ಲಿ ಐದು ಅಡಿಗಳಷ್ಟು ಗುಳಿಬಿದ್ದಿದೆ.
|