ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲಿನ ದಾಳಿಯು, ಸೋಮವಾರ ರಾಷ್ಟ್ರದ ರಾಜಧಾನಿಯಲ್ಲಿ ಪ್ರತಿಧ್ವನಿಸಿದ್ದು, ಸುಮಾರು 25 ಮಂದಿಯ ಗುಂಪೊಂದು ಮಹಾರಾಷ್ಟ್ರ ಸದನದಲ್ಲಿ ದಾಂಧಲೆ ಎಬ್ಬಿಸಿದ್ದು, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯ ಬಂಧನಕ್ಕೆ ಒತ್ತಾಯಿಸಿದೆ.
ರಾಷ್ಟ್ರವಾದಿ ಶಿವಸೇನಾದ ಕಾರ್ಯಕರ್ತರೆಂದು ಹೇಳಲಾದ ಪ್ರತಿಭಟನಾಕಾರರು "ಮರಾಠಿಗಳು ತೊಲಗಿರಿ" ಎಂಬ ಘೋಷಣೆಗಳನ್ನು ಕೂಗುತ್ತಾ, ಹೂಕುಂಡಗಳು, ಗಾಜಿನ ಕಿಟಿಕಿ ಬಾಗಿಲುಗಳನ್ನು ಒಡೆದು ಹಾಕಿದ್ದಾರೆ. ಮಧ್ಯಾಹ್ನ ಸುಮಾರು 12.30ರ ವೇಳೆಗೆ ಅವರು ಈ ದಾಂಧಲೆ ನಡೆಸಿದ್ದಾರೆ.
ಸಣ್ಣಸಣ್ಣ ಗುಂಪುಗಳಾಗಿ ಕಟ್ಟಡದೊಳಕ್ಕೆ ನುಗ್ಗಿದ ದಾಳಿಕೋರರು, ಇದ್ದಕ್ಕಿದ್ದಂತೆ ಸ್ವಾಗತ ಕೌಂಟರ್ ಬಳಿ ತೆರಳಿ ಕಟ್ಟಡದ ಆಸ್ತಿಪಾಸ್ತಿಗಳನ್ನು ಹಾಳುಗೆಡವಲು ಆರಂಭಿಸಿದರು. ಮತ್ತು ಮಹಾರಾಷ್ಟ್ರ ಸರಕಾರ ಮತ್ತು ಠಾಕ್ರೆ ವಿರುದ್ಧ ಘೋಷಣೆಗಳನ್ನು ಕೂಗಿದರು.
"ಚಿಕ್ಕಚಿಕ್ಕ ಗುಂಪುಗಳಾಗಿ ಕಟ್ಟಡದೊಳಕ್ಕೆ ಬಂದ ಅವರು ಇದ್ದಕ್ಕಿದ್ದಂತೆ ಘೋಷಣೆಗಳನ್ನು ಕೂಗುತ್ತಾ ಹಿಂಸಾಚಾರ ನಡೆಸಲಾರಂಭಿಸಿದರು. ಯಾರಿಗೂ ಇದರ ಸುಳಿವಿರಲಿಲ್ಲ" ಎಂದು ಸದನದ ಅಧಿಕಾರಿ ಪ್ರಮೋದ್ ಕೋಲಾಟೆ ನುಡಿದರು.
ಸ್ಥಾನಿಕ ಆಯುಕ್ತ ಅಪೂರ್ವ ಚಂದ್ರ ಅವರು ಈಗಾಗಲೇ ಘಟನೆಯ ಕುರಿತು ಪೊಲೀಸ್ ದೂರು ದಾಖಲಿಸಿದ್ದಾರಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಹಾಗೂ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಸದನಕ್ಕೆ ಭೇಟಿ ನೀಡಿರುವ ಶಿವಸೇನಾ ಸಂಸದ ಸಂಜಯ್ ರಾವುತ್, "ಇದು ಮಹಾರಾಷ್ಟ್ರದ ಮೇಲೆ ನಡೆಸಿರುವ ದಾಳಿಯಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
"ಈ ಕಿಡಿಯನ್ನು ನಾವು ಹತ್ತಿಸಲಿಲ್ಲ. ಇಂತಹ ಸಂದರ್ಭಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಯಾರು ಈ ಕೃತ್ಯ ನಡೆಸಿದ್ದಾರೋ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಸಂಜಯ್ ಒತ್ತಾಯಿಸಿದ್ದಾರೆ. |