ರಾಜಕೀಯ ಪಕ್ಷವೊಂದನ್ನು ಪ್ರಾರಂಭಿಸುವಂತೆ ಕಾಲಿವುಡ್ ಸ್ಟಾರ್ ರಜನೀಕಾಂತ್ ಅವರ ಅಭಿಮಾನಿಗಳು ಒತ್ತಡ ಹೇರುತ್ತಿದ್ದು, ಈ ಕುರಿತಾಗಿ ತಾನು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಜನೀಕಾಂತ್ ಸ್ಪಷ್ಟಪಡಿಸಿದ್ದಾರೆ.ತನ್ನ ಅಭಿಮಾನಿಗಳ ಭೇಟಿಗಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ ಅವರು, ಅಭಿಮಾನಿಗಳ ಆಕಾಂಕ್ಷೆಯನ್ನು ವಿರೋಧಿಸುವುದಿಲ್ಲ ಎಂಬ ಸೂಚನೆಯನ್ನೂ ನೀಡಿದ್ದಾರೆ.ರಾಜಕೀಯ ಸೇರುವ ಕುರಿತಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ರಾಜಕೀಯ ಸೇರುತ್ತೇನೆಯೇ ಇಲ್ಲವೇ ಎಂಬುದು ಕಾಲವು ನಿರ್ಧರಿಸುತ್ತದೆ. ರಾಜಕೀಯದಲ್ಲಿ ಒಬ್ಬನ ಯಶಸ್ಸನ್ನು ಕೇವಲ ಸಂದರ್ಭವು ನಿರ್ಧರಿಸುತ್ತದೆ ಎಂದಷ್ಟೇ ಹೇಳಿದ್ದಾರೆ.ಇತ್ತೀಚೆಗೆ ತೆಲುಗು ಸೂಪರ್ಸ್ಟಾರ್ ಚಿರಂಜೀವಿ ಅವರು ಪ್ರಜಾರಾಜ್ಯಂ ಎಂಬ ನೂತನ ಪಕ್ಷವನ್ನು ಪ್ರಾರಂಭಿಸಿದ ನಂತರ, ರಾಜಕೀಯ ಪ್ರವೇಶಿಸುವಂತೆ ರಜನೀಕಾಂತ್ ಅವರ ಮೇಲೂ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.ಒಂದು ವೇಳೆ ದೇವರು ಅನುಗ್ರಹಿಸಿದಲ್ಲಿ ರಾಜಕೀಯ ಪ್ರವೇಶಿಸುವ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ರಜನೀಕಾಂತ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದು, ಏನೇ ಆದರೂ, ಪ್ರಸಕ್ತ ತಾನು ತನ್ನ ಮುಂಬರುವ ಸಿನಿಮಾ 'ರೋಬೋಟ್'ನಲ್ಲಿ ಕಾರ್ಯನಿರತವಾಗಿರುವುದಾಗಿ ಹೇಳಿದ್ದಾರೆ. |
|