ನವದೆಹಲಿ: ತನ್ನ ಲಂಡನ್ ಬ್ಯಾಂಕ್ ಖಾತೆಯಿಂದ ಒಟ್ಟಾವಿಯೋ ಕ್ವಟ್ರೋಚಿ ಡ್ರಾ ಮಾಡಿದ ಹಣವು ಬೋಪೋರ್ಸ್ ಲಂಚ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸಿಬಿಐ ಮಾಜಿ ನಿರ್ದೇಶಕ ವಿಜಯ್ ಶಂಕರ್ ಅವರ ವಿರುದ್ಧ ಸಲ್ಲಿಸಲಾಗಿರುವ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ ವೇಳೆ ಈ ಅಂಶ ವ್ಯಕ್ತವಾಗಿದೆ.
ಅಜಯ್ ಅಗರ್ವಾಲ್ ಎಂಬವರು ಈ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಕ್ವಟ್ರೋಚಿ ವಿರುದ್ಧದ ಪ್ರಕರಣವನ್ನು ಕೈಗೆತ್ತಿಕೊಂಡಾಗ, ವಿಜಯ್ ಶಂಕರ್ ಅವರು, ಇಂಟರ್‌ಪೋಲ್ ಕ್ವಟ್ರೋಚಿಯನ್ನು ಬಂಧಿಸಲು ಅಡ್ಡಿಯುಂಟು ಮಾಡಿದರು ಎಂದು ಆರೋಪಿಸಿದ್ದಾರೆ.
ಆದರೆ, ಮಾಜಿ ಸಿಬಿಐ ನಿರ್ದೇಶಕರ ವಿರುದ್ಧ ನ್ಯಾಯಾಲಯ ನಿಂದನೆ ನೋಟೀಸ್ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದ್ದು, ನಿಂದನೆಯ ಕೃತ್ಯವನ್ನು ವಿವರಿಸದೇ ಇದ್ದಲ್ಲಿ ನೋಟೀಸ್ ನೀಡುವುದಿಲ್ಲ ಎಂದು ಹೇಳಿದೆ.
ಸ್ವೀಡನ್‌ನಿಂದ ಬೋಫೋರ್ಸ್ ಬಂದೂಕುಗಳನ್ನು ಖರೀದಿಸಲು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಇತರರು ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಗರಣ 1980ರಲ್ಲಿ ಬೆಳಕಿಗೆ ಬಂದಿತ್ತು.
2004ರ ಫೆಬ್ರವರಿಯಲ್ಲಿ ರಾಜೀವ್ ಗಾಂಧಿ ಅವರನ್ನು ತಪ್ಪಿತಸ್ಥರಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದರೆ, 2005ರ ಮೇ ತಿಂಗಳಲ್ಲಿ ಹಿಂದೂಜಾಗಳನ್ನು ದೋಷ ಮುಕ್ತವಾಗಿಸಿತ್ತು.
ಸಿಬಿಐ, ಹೈ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇದ್ದರೂ, ಅಜಯ್ ಅಗರ್ವಾಲ್ ಎಂಬ ವಕೀಲರು ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿಸಲ್ಲಿಸಿದ್ದು, ಇದು ವಿಚಾರಣೆಗೆ ಬಾಕಿಯುಳಿದಿದೆ.
ಕಳೆದು ಹೋಗಿದೆ ಎಂದು ಹೇಳಲಾಗಿರುವ ಹಣದ ಪತ್ತೆಗಾಗಿ ತನ್ನ ಅಧಿಕಾರಿಗಳು ಬಹಳ ದೂರದ ದ್ವೀಪಗಳಿಗೂ ಪ್ರಯಾಣ ಬೆಳೆಸಿದ್ದರಾದರೂ ಏನೂ ಪತ್ತೆಯಾಗಿಲ್ಲ ಎಂದು ಸಿಬಿಐ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಪ್ರಕರಣದ ಮುಂದಿನ ವಿಚಾರಣೆ 2009ರ ಫೆಬ್ರವರಿಯಲ್ಲಿ ನಡೆಯಲಿದೆ. |