ಈಶಾನ್ಯ ದೆಹಲಿಯ ರಾಷ್ಟ್ರವಾದಿ ಶಿವಸೇನಾ ಕಚೇರಿಯಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಆಕಸ್ಮಿಕ ಸಂಭವಿಸಿರುವುದಾಗಿ ಅಗ್ನಿಶಾಮಕ ದಳ ತಿಳಿಸಿದೆ.
ಮುಂಜಾನೆ ಸುಮಾರು 9.10 ಗಂಟೆಯ ವೇಳೆಗೆ ಶಹದರದಲ್ಲಿರುವ ಸಂಘಟನೆಯ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕಕ್ಕೆ ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರವಾದಿ ಶಿವಸೇನೆಯ ಕಾರ್ಯಕರ್ತರು ಮಹಾರಾಷ್ಟ್ರ ಸದನದಲ್ಲಿ ದಾಂಧಲೆ ಎಬ್ಬಿಸಿ ಕಿಟಿಕಿ ಹಾಗೂ ಬಾಗಿಲುಗಳ ಗಾಜುಗಳನ್ನು ಪುಡಿಗೈದಿರುವ ಮರುದಿನ ಈ ಆಕಸ್ಮಿಕ ಸಂಭವಿಸಿದೆ. ಶಿವಸೇನೆಯ ಉತ್ತರಭಾರತ ವಿರೋಧಿ ನಿಲುವನ್ನು ಪ್ರತಿಭಟಿಸಿ ರಾಷ್ಟ್ರವಾದಿ ಶಿವಸೇನೆಯ ಕಾರ್ಯಕರ್ತರು ಮಹಾರಾಷ್ಟ್ರ ಸದನದ ಮೇಲೆ ಸೋಮವಾರ ದಾಳಿ ನಡೆಸಿ ಎಂಎನ್ಎಸ್ ಮುಖ್ಯಸ್ಥ ರಾಜ್‌ಠಾಕ್ರೆ ಬಂಧನಕ್ಕೆ ಒತ್ತಾಯಿಸಿದ್ದರು.
ರಾಷ್ಟ್ರವಾದಿ ಶಿವಸೇನೆಯ ಅಧ್ಯಕ್ಷ ಜೈಭಗವಾನ್ ಗೋಯಲ್ ಅವರು ಎಂಎನ್ಎಸ್ ಮುಖ್ಯಸ್ಥರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದ್ದು, ಇಲ್ಲವಾದರೆ ಇನ್ನಷ್ಟು ತೀವ್ರ ಚಳುವಳಿ ಹೂಡುವುದಾಗಿ ಬೆದರಿಕೆ ಹಾಕಿದ್ದರು. |