ಮೊಡವೆಯ ಗೊಡವೆಯೇಕೆ ಅಂತ ಸುಮ್ಮನಿರುವಂತಿಲ್ಲ... ಅದು ಬರೇ ನಮ್ಮ ಆತ್ಮವಿಶ್ವಾಸವನ್ನು ಮಾತ್ರವೇ ಕೆಡಿಸುವುದಲ್ಲ, ಒಂದು ವಿವಾಹ ಸಂಬಂಧವನ್ನೇ ಕೆಡಿಸಿ ವಿಚ್ಛೇದನೆಗೂ ಕಾರಣವಾಗಬಲ್ಲುದು ಎಂಬುದಕ್ಕೆ ಉದಾಹರಣೆ ಮುಂಬಯಿಯಿಂದ ವರದಿಯಾಗಿದೆ.
ತನ್ನ ಪತ್ನಿಯ ಮುಖದಲ್ಲಿ ಮೊಡವೆಗಳ ಸಾಲು ಸಾಲು ನೋಡಿ ನೋಡಿ ಬೇಸತ್ತಿದ್ದೇನೆ, ಇದಕ್ಕಾಗಿ ವಿವಾಹ ವಿಚ್ಛೇದನೆ ನೀಡಬೇಕು ಎಂದು ಹನಿಮೂನ್ ಆಗಷ್ಟೇ ಮುಗಿಸಿ ಬಂದ ಪತಿ ಮಹಾಶಯನೋರ್ವ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಅದನ್ನು ನ್ಯಾಯಾಲಯವೂ ಮಾನ್ಯ ಮಾಡಿತ್ತು.
ಪತ್ನಿಯ ಅಸಹ್ಯಕರ ಸ್ಥಿತಿಯು ಆಕೆಗೆ ವಿಷಾದನೀಯವಾದರೂ, ಅದು ಆಕೆಯ ಪತಿಗೆ ಮನೋಕ್ಷೋಭೆಯ ವಿಷಯವೂ ಹೌದು ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದರಿಂದ ವೈವಾಹಿಕ ಬಂಧ ಪೂರ್ಣವಾಗಿಲ್ಲ ಎಂಬ ಪತಿಯ ವಾದವನ್ನೂ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿತ್ತು. ಈ ಮಹಿಳೆಯು ತನಗೆ ಅನಾರೋಗ್ಯವಿದೆ ಎಂಬುದನ್ನು ಮುಚ್ಚಿಡುವ ಮೂಲಕ ಪತಿಗೆ ಆತನಿಗೆ ವಂಚನೆ ಎಸಗಿದ್ದಳು ಎಂದೂ ಕೋರ್ಟು ಅಭಿಪ್ರಾಯಪಟ್ಟಿತ್ತು.
ಆದರೆ ಈ ಮಹಿಳೆಗೆ ಇದೀಗ ಮುಂಬಯಿ ಹೈಕೋರ್ಟ್ ಹೊಸ ಜೀವನ ನೀಡಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿದೆ.
ಆದದ್ದಿಷ್ಟು: ಅಶ್ವಿನ್ ಮತ್ತು ರೀಮಾ (ಹೆಸರು ಬದಲಾಯಿಸಲಾಗಿದೆ) 1998ರ ಫೆಬ್ರವರಿ 2ರಂದು ವಿವಾಹವಾಗಿದ್ದರು. ಆದರೆ, ರೀಮಾಳ ಬಾಯಿಯ ಸುತ್ತ ಗುಳ್ಳೆಗಳಿದ್ದುದರಿಂದ ವಿವಾಹ ಸಂಬಂಧ ಮುಂದುವರಿಸುವುದು ತನಗೆ ಅಸಹನೀಯ ಎಂದು ಅಶ್ವಿನ್ ವಾದಿಸಿದ್ದ. ಕೆಲವೊಂದು ಬಾರಿ ಆ ಗುಳ್ಳೆಗಳು ಒಡೆದು ಅಸಹನೀಯ ವಾಸನೆಯೂ ಬರುತ್ತಿತ್ತು ಎಂದಿದ್ದಾನೆ ಆತ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಚರ್ಮ ಸಂಬಂಧಿತ ರೋಗವು ಆಕೆಗೆ ಬಾಲ್ಯದಿಂದಲೇ ಇತ್ತು, ಅದನ್ನಾಕೆ ತನ್ನಿಂದ ಮುಚ್ಚಿಟ್ಟಿದ್ದಳು ಎಂಬುದು ತಿಳಿದುಬಂದಾಗ ಅಶ್ವಿನ್ ತೀವ್ರವಾಗಿ ಕೋಪಗೊಂಡಿದ್ದ. ಬಳಿಕ ರೀಮಾಳನ್ನು ಕರೆದೊಯ್ದು, ಸೂಕ್ತ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುವಂತೆ ಅಶ್ವಿನ್ ತನ್ನ ಅತ್ತೆ-ಮಾವನಿಗೆ ಹೇಳಿದ. ರೋಗ ಗುಣಮುಖವಾದ ಬಳಿಕ ಮರಳಿ ಕರೆಸಿಕೊಳ್ಳುವುದಾಗಿ ಅಶ್ವಿನ್ ವಾಗ್ದಾನ ನೀಡಿದ ಹಿನ್ನೆಲೆಯಲ್ಲಿ ರೀಮಾ ತನ್ನ ತವರು ಮನೆ ಸೇರಿಕೊಂಡಳು.
1998ರ ಮೇ ತಿಂಗಳಲ್ಲಿ, ಅಶ್ವಿನ್‌ಗೆ ಫೋನ್ ಮಾಡಿದ ರೀಮಾ, ತನ್ನನ್ನು ಕರೆಸಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದಳು. ಆಗ ಅಶ್ವಿನ್ ಆಕೆಗೆ ನೋಟೀಸ್ ಕಳುಹಿಸಿದ. ಇದೇ ವೇಳೆ, ತನ್ನ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ರೀಮಾ ಕೂಡ ಪೊಲೀಸರಿಗೆ ದೂರು ನೀಡಿದಳು.
ವಿವಾದವು ಕೌಟುಂಬಿಕ ನ್ಯಾಯಾಲಯಕ್ಕೆ ಹೋಯಿತು. 'ಏಕ್ನೆ ವಲ್ಗಾರಿಸ್' ಎಂಬ ಚರ್ಮಸಂಬಂಧಿ ರೋಗಕ್ಕಾಗಿ ಆಕೆಗೆ ವಿವಾಹದ ಬಳಿಕ ನಾಲ್ಕು ತಿಂಗಳ ಚಿಕಿತ್ಸೆ ನೀಡಿರುವುದಾಗಿ ವೈದ್ಯರು ಹೇಳಿಕೆ ನೀಡಿದರು. ಇದು ಗುಣಪಡಿಸಬಹುದಾದ ಸ್ಥಿತಿಯಾಗಿದ್ದು, ದಂಪತಿಗಳ ನಡುವೆ ದೈಹಿಕ ಸಂಬಂಧಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದು ಎಂದು ಅವರು ವಾದಿಸಿದರು.
ಆದರೆ, ಅಶ್ವಿನ್ ನೋಟೀಸ್ ಕಳುಹಿಸಿದ ನಾಲ್ಕು ತಿಂಗಳ ಬಳಿಕವಷ್ಟೇ ವೈದ್ಯರು ರೀಮಾಳಿಗೆ ಚಿಕಿತ್ಸೆ ನೀಡಿದ್ದರು ಎಂಬ ಕಾರಣಕ್ಕೆ ವೈದ್ಯಕೀಯ ಹೇಳಿಕೆಗಳನ್ನು ನ್ಯಾಯಾಲಯ ತಿರಸ್ಕರಿಸಿತು. 2002ರ ಏಪ್ರಿಲ್ ತಿಂಗಳಲ್ಲಿ ನ್ಯಾಯಾಲಯವು ಈ ವಿವಾಹವನ್ನು ರದ್ದುಪಡಿಸಿ ತೀರ್ಪು ನೀಡಿತು.
ಅಂದಿನಿಂದ ಆರು ವರ್ಷಗಳ ಕಾಲ ರೀಮಾ, ಹೈಕೋರ್ಟಿನಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಹೋರಾಟ ನಡೆಸಿದಳು. "ಇದು ಮೊಂಡು ವಾದವಾಗಿದ್ದು, ತೀರ್ಪು ರದ್ದಾಗಬೇಕು. ಮೊಡವೆಗಳು ಗುಣಪಡಿಸಬಹುದಾದ ವಿಷಯವಾಗಿದ್ದು, ವೈವಾಹಿಕ ಜೀವನದಲ್ಲಿ ಸಹಬಾಳ್ವೆಗೆ ಅವೇನೂ ತೊಂದರೆಯೊಡ್ಡುವುದಿಲ್ಲ" ಎಂದು ಆಕೆ ವಾದಿಸಿದಳು.
ಹೈಕೋರ್ಟ್ ಈಗ ಆಕೆಯ ಪರವಾಗಿ ತೀರ್ಪು ನೀಡಿದ್ದು, ಅಶ್ವಿನ್ ಪತ್ನಿ ರೀಮಾಳಿಗೆ 2.5 ಲಕ್ಷ ರೂ. ನೀಡಲು ಮತ್ತು ಎಲ್ಲಾ ಕೇಸುಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದಾನೆ. |