ಸಂಘಪರಿವಾರದ ಸೈದ್ಧಾಂತಿಕ ಪ್ರಯೋಗಾಲಯವೆಂದು ಪರಿಗಣಿತವಾಗಿದ್ದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಕೇಸರಿ ಪಡೆಯಿಂದ ಟೀಕೆ ಎದುರಿಸುವ ಪರಿಸ್ಥಿತಿ ಎದುರಾಗಿದೆ.ಸಂಘಪರಿವಾರದ ಕಾರ್ಯದರ್ಶಿ ಅಶ್ವಿನ್ ಪಟೇಲ್ ಅವರನ್ನು ರಾಜದ್ರೋಹದ ಆರೋಪದ ಮೇಲೆ ಬಂಧಿಸಲಾಗಿರುವುದು ಸಂಘಪರಿವಾರದ ಸಿಟ್ಟಿಗೆ ಕಾರಣ. ಮೋದಿ ಸರಕಾರದ ವಿರುದ್ಧದ ಎಸ್ಎಂಎಸ್ ಚಳುವಳಿ ನಡೆಸಿದ್ದಾರೆಂಬ ಆರೋಪದಲ್ಲಿ ಪಟೇಲ್ ಅವರನ್ನು ಬಂಧಿಸಲಾಗಿದೆ. ಇದು ಮೋದಿ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿದೆ." ಅಶ್ವಿನ್ ಪಟೇಲ್ ಅವರನ್ನು ತಕ್ಷಣ ಬಿಡುಗಡೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ, ಅವಶ್ಯಕತೆಯುಂಟಾದಲ್ಲಿ ರಾಷ್ಟ್ರಾದ್ಯಂತ ಚಳುವಳಿ ಹೂಡುವುದಾಗಿ ವಿಹಿಂಪ ಗುಜರಾತ್ ಘಟಕದ ದಿಲಿಪ್ ತ್ರಿವೇದಿ ಹೇಳಿದ್ದಾರೆ.ಇತ್ತೀಚಿನ ಕೆಲದಿನಗಳಿಂದ ಮೋದಿ ಸಂಘಪರಿವಾರದೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಮೋದಿ ಇಮೇಜ್ ಹಿಂದುತ್ವವನ್ನೂ ಬದಿಗೆ ಸರಿಸುತ್ತಿದೆ. ಮೋದಿ ಅವರು ಅಮರನಾಥ್ ಭೂವಿವಾದಕ್ಕೆ ಸಂಬಂಧಿಸಿದಂತೆ ಗುಜರಾತಿನಲ್ಲಿ ವಿಹಿಂಪ ನೀಡಿದ್ದ ಬಂದ್ ಕರೆಗೆ ಬೆಂಬಲ ನೀಡಿರಲಿಲ್ಲ.ಬಿಜೆಪಿಯು ವಿಹಿಂಪ ಆರೋಪಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಅಶ್ವಿನ್ ಪಟೇಲ್ ಬಂಧನದಲ್ಲಿ ತಾನು ಹಸ್ತಕ್ಷೇಪ ನಡೆಸುವಂತಿಲ್ಲ ಎಂದು ಅದು ಹೇಳಿದೆ. ಅಲ್ಲದೆ, ಇದು ಸಂಪೂರ್ಣವಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರವಾಗಿದ್ದು, ಈ ಕುರಿತು ಮೋದಿ ಸರಕಾರ ಕಾಳಜಿ ವಹಿಸಬೇಕಿದೆ ಎಂದು ಹೇಳಿದೆ. |
|