ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸೊಂದು ಸುಮಾರು 200 ಮೀಟರ್ ಆಳದ ಕಮರಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 45 ಮಂದಿ ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡಿರುವ ದಾರುಣ ಘಟನೆ ಶಿಮ್ಲಾದ ಪ್ರಖ್ಯಾತ ಪ್ರವಾಸಿ ತಾಣ ಕುಫ್ರಿ ಸಮೀಪ ಸಂಭವಿಸಿದೆ.
ಬಸ್ಸಿನಲ್ಲಿದ್ದ 44 ಮಂದಿ ಅಪಘಾತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೋರ್ವ ನತದೃಷ್ಟ ಇಂದಿರಾಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಮೋಹನ್ ಶರ್ಮಾ ತಿಳಿಸಿದ್ದಾರೆ.
ಗಾಯಾಳುಗಳು ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಯು ಸುಮಾರು ಪೂರ್ವಾಹ್ನ 11 ಗಂಟೆಯ ವೇಳೆಗೆ ಸಂಭವಿಸಿದೆ. ಬಸ್ ರಾಂಪುರ ಉಪವಿಭಾಗದ ಕೋಟಿ ಘಾಟ್‌ನಿಂದ ಶಿಮ್ಲಾಗೆ ತೆರಳುತ್ತಿತ್ತು. ಕುಫ್ರಿಯಿಂದ ಐದು ಕಿ.ಮೀ ದೂರದಲ್ಲಿ ಲಂಬಿ ಧಾರ್ ಸಮೀಪ ರಾಂಪುರ-ಶಿಮ್ಲಾ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. 200 ಮೀಟರ್ ಎತ್ತರದಿಂದ ಉರುಳಿದ್ದ ಬಸ್ಸು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತಕ್ಕೆ ಕಾರಣ ಏನೆಂಬುದು ಇನ್ನಷ್ಟೆ ಪತ್ತೆಯಾಗಬೇಕಿದೆ. ಅಪಘಾತದ ಸುದ್ದಿತಿಳಿಯುತ್ತಿದ್ದಂತೆ, ಶರ್ಮಾ ಅವರು ಉಪಆಯುಕ್ತ ಜೆ.ಎಸ್.ರಾಣಾ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. |