ಕೋಸಿ ನದಿಯ ಪ್ರವಾಹ ಸಮಸ್ಯೆಗೆ ಸುದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಉನ್ನತ ಮಟ್ಟದ ತಾಂತ್ರಿಕ ತಂಡವೊಂದು ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.
ಭಾರತದ ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಎ.ಕೆ. ಬಾಜ ಅವರ ನೇತೃತ್ವದ ತಂಡ ಮಂಗಳವಾರ ಕಾಠ್ಮಂಡು ತಲುಪಿದೆ. ತಂಡವು ಕೋಸಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ನೇಪಾಳದಲ್ಲಿ ಭಾರತೀಯ ರಾಯಭಾರಿ ರಾಕೇಶ್ ಸೂದ್ ಅವರೂ ಉಪಸ್ಥಿತರಿದ್ದರು.
ಕಳೆದ ಆಗಸ್ಟ್ ತಿಂಗಳಲ್ಲಿ ಸುನ್ಸಾರಿ ಜಿಲ್ಲೆಯ ಪಶ್ಚಿಮ ಕೌಶಾಹದಲ್ಲಿ ಸಪ್ತಕೋಸಿ ನದಿಯ ಅಣೆಕಟ್ಟು ಒಡೆದಿದ್ದು ಉಂಟಾದ ಪ್ರವಾಹದಿಂದಾಗಿ ಹಲವಾರು ಸಾವು ನೋವುಗಳು ಸಂಭವಿಸಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ನೇಪಾಳದಲ್ಲಿ ಸುಮಾರು 60 ಸಾವಿರ ಮಂದಿ ಇದರ ಪ್ರಭಾವಕ್ಕೊಳಗಾಗಿದ್ದರೆ, ಬಿಹಾರದಲ್ಲಿ 3.2 ದಶಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ. |