ಹಿಂದೂಗಳು ತಿಲಕ, ವಿಭೂತಿ, ಕುಂಕುಮ ಹಣೆಯಲ್ಲಿ ಧರಿಸುವ ಬಗ್ಗೆ ಮತ್ತೊಂದು ಬಾರಿ ಕಿಡಿ ಕಾರಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, "ಎಲ್ಲಾ ಧರ್ಮಗಳಿಗೂ ಸಮಾನತೆ ಬೋಧಿಸುವ ಈ ದೇಶದಲ್ಲಿ" ಇವುಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೆ ಬ್ರಾಹ್ಮಣ ವರ್ಗದವರು ಯಜ್ಞೋಪವೀತ (ಜನಿವಾರ) ಧರಿಸುವ ಪರಂಪರೆಯನ್ನೂ ಅವರು ಪ್ರಶ್ನಿಸಿದ್ದಾರೆ." ಎಲ್ಲಾ ಧರ್ಮಗಳನ್ನು ಸ್ವೀಕರಿಸಿದ ಮತ್ತು ಅವುಗಳ ಸಮಾನತೆಯನ್ನು ಬೋಧಿಸಿದ ಈ ದೇಶದಲ್ಲಿ ಇವೆಲ್ಲವುಗಳ ಅವಶ್ಯಕತೆಯೇನಿದೆ" ಎಂದು ತಾವು ಬರೆದಿರುವ ಕವನವೊಂದರಲ್ಲಿ ಅವರು ಪ್ರಶ್ನಿಸಿದ್ದಾರೆ. ಮದುರೈಯಲ್ಲಿ ಜಾತಿ ಸಂಬಂಧಿ ಹಿಂಸಾಚಾರ ನಡೆದು ಪೊಲೀಸ್ ಗೋಲೀಬಾರ್‌ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಕರುಣಾನಿಧಿ ಕವನ ಬರೆದಿದ್ದರು.ಈ ಹಿಂದೆಯೂ ಅವರು ಹಣೆಯಲ್ಲಿ ವಿಭೂತಿ ಮತ್ತು ತಿಲಕ ಧರಿಸುವುದನ್ನು ತೀವ್ರವಾಗಿ ಆಕ್ಷೇಪಿಸಿದ್ದರು. ಮಾತ್ರವಲ್ಲದೆ, ಇತರ ಕೆಲವು ಹಿಂದೂ ಸಂಪ್ರದಾಯಗಳನ್ನೂ ಪ್ರಶ್ನಿಸಿದ್ದ ಅವರು, ಹಿಂದೂಗಳು 'ದರೋಡೆಕೋರರು' ಎಂಬಂತಹ ಹೇಳಿಕೆ ನೀಡಿದ್ದರು. ಆ ಬಳಿಕ ಅವರು ಸ್ಪಷ್ಟನೆ ನೀಡಿ, ತಾನು ಹಿಂದೂಗಳು 'ಹೃದಯಗಳನ್ನು ದರೋಡೆ' ಮಾಡುವವರು ಎಂದಿದ್ದೆನೆಂದು ಹೇಳಿದ್ದರು.ಸೇತು ಸಮುದ್ರ ಯೋಜನೆ ಸಂದರ್ಭದಲ್ಲಿ ಶ್ರೀರಾಮನನ್ನು 'ಕುಡುಕ' ಎಂದು ಬಣ್ಣಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅವರು, ಸೇತುವೆ ಕಟ್ಟಲು ಶ್ರೀರಾಮನು ಯಾವ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ್ದ ಎಂದೆಲ್ಲಾ ಹೇಳಿದ್ದರು. |
|