ಮುಂಬೈ ಬಿಟಿಎಸ್ ಬಸ್ಸಿನಲ್ಲಿ ಪಿಸ್ತೂಲು ಹಿಡಿದು ದಾಂಧಲೆ ಎಬ್ಬಿಸಿರುವ ಬಿಹಾರ ಯುವಕನನ್ನು ಅತ್ಯಂತ ಹತ್ತಿರದಿಂದ ಗುಂಡಿಕ್ಕಲಾಗಿದೆ ಎಂದು ಮರಣೋತ್ತರ ಪರೀಕ್ಷೆ ಹೇಳಿದೆ. ಇದರಿಂದಾಗಿ ಈತನಿಗೆ ಗುಂಡಿಕ್ಕುವ ಬದಲು ಜೀವಂತ ಸೆರೆಹಿಡಿಯಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆಗಳು ಮತ್ತೆ ಚಿಗುರಿವೆ.ಅಕ್ಟೋಬರ್ 27ರಂದು, 25ರ ಹರೆಯದ ರಾಹುಲ್ ರಾಜ ಎಂಬಾತ, ರೈಲ್ವೇ ನೇಮಕಾತಿ ಪರೀಕ್ಷೆ ಬರೆಯಲು ಬಂದಿರುವ ಬಿಹಾರಿಗಳನ್ನು ಥಳಿಸಿದ ಎಂಎನ್ಎಸ್ ಸಂಘಟನೆಯ ಮುಖ್ಯಸ್ಥ ರಾಜ್‌ಠಾಕ್ರೆಯನ್ನು ಕೊಲ್ಲಲು ಬಂದಿದ್ದೇನೆ ಎನ್ನುತ್ತಾ ಗದ್ದಲ ಎಬ್ಬಿಸಿದ್ದ. ಬಸ್ ಪ್ರಯಾಣಿಕರು ಹಾಗೂ ನಿರ್ವಾಹಕನ ಮೇಲೆ ಹಲ್ಲೆಯನ್ನೂ ಮಾಡಿದ್ದ.ಜೆಜೆ ಆಸ್ಪತ್ರೆಯ ನಾಲ್ಕು ಸದಸ್ಯರ ಫಾರೆನ್ಸಿಕ್ ತಜ್ಞರ ತಂಡವು ಈ ಮರಣೋತ್ತರ ಪರೀಕ್ಷೆ ನಡೆಸಿದೆ. ಆತನ ದೇಹದಲ್ಲಿ ಗುಂಡೇಟಿನ ಐದು ಗಾಯಗಳಿದ್ದವು. ಎದೆ ಮತ್ತು ತಲೆಯ ಭಾಗದಲ್ಲಿ ಗಾಯಗಳಿದ್ದವು. ನಾಲ್ಕು ಗುಂಡುಗಳು ದೇಹದಿಂದ ಹೊರಹೋಗಿದ್ದು, ಇನ್ನೊಂದು ಗುಂಡನ್ನು ದೇಹದಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ." ರಾಹುಲ್ ಮುಖದಲ್ಲಿ ಗುಂಡೇಟು ತಗುಲಿದ ಜಾಗದ ಸುತ್ತಲು ಕರಿಯಛಾಯೆ ಉಂಟಾಗಿತ್ತು. ಇದಕ್ಕೆ ತಾಂತ್ರಿಕ ಕಾರಣವೆಂದರೆ ಅತ್ಯಂತ ಸನಿಹದಿಂದ ಗುಂಡು ಹಾರಿಸಿರುವುದು. ಗನ್‍ಪೌಡರ್‌ನಿಂದಾಗಿ ಗಾಯದ ಸುತ್ತ ಚರ್ಮ ಸುಡುತ್ತದೆ ಮತ್ತು ಬಣ್ಣಗಪ್ಪಾಗುತ್ತದೆ" ಎಂದು ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಸಹಾಯಕ ಪ್ರೊಫೆಸರ್ ಡಾ| ಬಿ.ಜಿ.ಚಿಕಲ್‌ಕರ್ ಅವರು ಹೇಳಿದ್ದಾರೆ. |
|