ರಾಷ್ಟ್ರದ ಆರು ರಾಜ್ಯಗಳಲ್ಲಿ ಚುನಾವಣಾ ಘೋಷಣೆಯಾಗಿದ್ದು ಕಾವು ಏರುತ್ತಿರುವಂತೆ, ಗೊಂದಲದ ಮಡುವಲ್ಲಿ ಬಿದ್ದಿರುವ ಕಾಂಗ್ರೆಸ್‌ನೊಳೆಗೆ ಎಲ್ಲವೂ ಸರಿಇರುವಂತಿಲ್ಲ.
ಕರ್ನಾಟಕದಲ್ಲಿನ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಗುರುವಾರ ಆಪಾದಿಸಿದ್ದಾರೆ.
ತನ್ನ ಪುತ್ರ ನಿವೇದಿತ್‌ಗೆ ಟಿಕೆಟ್ ಸಿಗಲಿಲ್ಲ ಎಂದು ಇನ್ನೂ ಸಿಟ್ಟಿನಿಂದ ಕುದಿಯುತ್ತಿರುವ ಆಳ್ವ, ಮುಂಬರುವ ಆರು ರಾಜ್ಯಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ವಿವಿಧ ರೀತಿಯ ಮಾನದಂಡ ಬಳಸುತ್ತಿರುವ ರೀತಿಯಿಂದ ಕೋಪೋದ್ರಿಕ್ತರಾಗಿದ್ದು, ಮೇಲಿನ ಆರೋಪ ಮಾಡಿದ್ದಾರೆ.
ಮಧ್ಯಪ್ರದೇಶ, ಚತ್ತೀಸ್‌ಗಡ, ರಾಜಸ್ಥಾನ ಹಾಗೂ ಜಮ್ಮು ಕಾಶ್ಮೀರದಲ್ಲಿ ಡಜನ್‌ಗಟ್ಟಲೆ ನಾಯಕರ ಸಂಬಂಧಿಗಳಿಗೆ ಟಿಕೆಟ್ ನೀಡಿರುವ ಕ್ರಮದಿಂದ ಅಚ್ಚರಿಗೊಂಡಿರುವ ಅವರು ತನ್ನ ಪುತ್ರ ಹಾಗು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ಮೊಮ್ಮಗನಿಗೆ ಯಾಕೆ ಟಿಕೆಟ್ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ನನ್ನ ಮಗ ಮತ್ತು ಜಾಫರ್ ಶರೀಫ್ ಪುತ್ರ ರಾಷ್ಟ್ರ ವಿರೋಧಿಗಳೇ? ಇಲ್ಲ ಭಯೋತ್ಪಾದಕರೇ? ಅಥವಾ ಕಳ್ಳ ಸಾಗಣಿಕೆದಾರರೇ? ಎಂದು ಮಹಾರಾಷ್ಟ್ರ, ಪಂಜಾಬ್ ಮತ್ತು ಹರ್ಯಾಣಗಳೂ ಸೇರಿದಂತೆ ಚುನಾವಣಾ ಉಸ್ತುವಾರಿಯಾಗಿರುವ ಆಳ್ವ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಪಕ್ಷದ ವಿದ್ಯಮಾನಗಳ ಉಸ್ತುವಾರಿಯಾಗಿರುವ ಇನ್ನೋರ್ವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ ಚೌವಾಣ್ ಅವರು ಆಳ್ವ ಅವರ ಹೇಳಿಕೆಯನ್ನು ನಿರಾಧಾರವಾದುದು ಮತ್ತು ನಿರಾಸೆಯಿಂದ ಹೊರಬಿದ್ದ ಹೇಳಿಕೆಯಾಗಿದೆ ಎಂದು ತಳ್ಳಿಹಾಕಿದ್ದಾರೆ.
ವರದಿಗಾರರೊಂದಿಗೆ ಈ ಕುರಿತು ಮಾತನಾಡಿರುವ ಪೃಥ್ವಿರಾಜ್, ಆಳ್ವ ಪ್ರಧಾನ ಕಾರ್ಯದರ್ಶಿಯಾಗಿರವ ತನಕ ಈ ದುರಾದೃಷ್ಟದ ಹೇಳಿಕೆ ಕುರಿತು ತಾನು ಪ್ರತಿಕ್ರಿಯಿಸಲಾರೆ ಎಂದು ಹೇಳಿದ್ದಾರೆ. ಆಕೆ ಪ್ರಧಾನ ಕಾರ್ಯದರ್ಶಿ ಆಗಿರುವ ಕಾರಣ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಮತ್ತು ಕೇಂದ್ರಿಯ ಶಿಸ್ತು ಸಮಿತಿ ಮಾತ್ರ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದರು.
ತನ್ನ ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲ ಎಂಬುದು ಮಾತ್ರವಲ್ಲದೆ, ಆಳ್ವರ ಬದ್ಧವೈರಿ ಆರ್.ವಿ.ದೇಶಪಾಂಡೆಯವರನ್ನು ಕೆಪಿಸಿಸಿಐ ಅಧ್ಯಕ್ಷರನ್ನಾಗಿ ಮಾಡಿರುವುದೂ ಅವರ ಉರಿಯ ಬೆಂಕಿಗೆ ಪೆಟ್ರೋಲ್ ಸುರಿದಿದೆ.
|