ಕರ್ನಾಟಕ ವಿಧಾನ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಟಿಕೆಟ್‌ಗಳನ್ನು ಮಾರಲಾಗಿತ್ತು ಎಂಬ ಗಂಭೀರ ಆರೋಪ ಮಾಡಿರುವ ಮಾರ್ಗರೆಟ್ ಆಳ್ವ ವಿರುದ್ಧ, ಕಾಂಗ್ರೆಸ್ ಹೈಕಮಾಂಡ್ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಕಾಂಗ್ರೆಸ್ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿರುವ ಸುಶಿಲ್ ಕುಮಾರ್ ಶಿಂಧೆ ನೇತೃತ್ವದ ತನಿಖಾ ಸಮಿತಿಯನ್ನು ನೇಮಿಸಲಾಗಿದ್ದು, ಮೂರು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಹೇಳಲಾಗಿದೆ.
ಮಾರ್ಗರೆಟ್ ಆಳ್ವ ಅವರು ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಏಕ ರೀತಿಯ ಮಾನದಂಡವನ್ನು ಅನುಸರಿಸುತ್ತಿಲ್ಲ ಎಂದು ಗರುವಾರ ದೂರಿದ್ದರು. ಪ್ರಸ್ತುತ ಚುನಾವಣೆ ಘೋಷಣೆಯಾಗಿರುವ ಆರು ರಾಜ್ಯಗಳಲ್ಲಿ ಡಜನ್‌ಗಟ್ಟಲೆ ನಾಯಕರ ಸಂಬಂಧಿಗಳಿಗೆ ಟಿಕೆಟ್ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ತನ್ನ ಮಗ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಮೊಮ್ಮಗನಿಗೆ ಟಿಕೆಟ್ ನಿರಾಕರಿಸಲು ಕಾರಣವಾದರೂ ಏನು ಎಂದು ಪ್ರಶ್ನಿಸಿರುವ ಅವರು ಈ ಇಬ್ಬರು, ಕಳ್ಳರೇ, ಸುಳ್ಳರೇ, ದೇಶದ್ರೋಹಿಗಳೇ ಎಂದು ಪ್ರಶ್ನಿಸಿದ್ದರು.
ಇದಲ್ಲದೆ, ಆರ್.ವಿ.ದೇಶಪಾಂಡೆಯವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿರುವುದೂ ಮಾರ್ಗರೆಟ್ ಆಳ್ವ ಅವರ ಉರಿಯನ್ನು ಹೆಚ್ಚಿಸಿದ್ದು, ಕಾಂಗ್ರೆಸ್ ವಿರುದ್ಧ ಭಾರೀ ಟೀಕಾ ಪ್ರಹಾರ ನಡೆಸಿದ್ದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಪದಾಕಾಂಕ್ಷಿಗಳಾಗಿದ್ದ ಹಲವು ಕಾಂಗ್ರೆಸ್ ನಾಯಕರಲ್ಲಿ ಮಾರ್ಗರೆಟ್ ಆಳ್ವ ಅವರೂ ಒಬ್ಬರಾಗಿದ್ದರು. ಇವರು ಬೆಂಗಳೂರಿನ 'ಸುರಕ್ಷಿತ ಕ್ಷೇತ್ರವಾಗಿರುವ' ಸರ್ವಜ್ಞ ನಗರದಿಂದ ತನ್ನ ಪುತ್ರನಿಗೆ ಟಿಕೇಟ್ ಬಯಸಿದ್ದರು ಎಂದು ಇತರ ನಾಯಕರು ದೂರಿದ್ದಾರೆ. ಇಲ್ಲಿ ಜಾಫರ್ ಮೊಮ್ಮಗ ಸೇರಿದಂತೆ ಇತರ 40 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು ಎಂದು ಹೆಸರು ಹೇಳಲಿಚ್ಚಿಸದ ನಾಯಕರು ಹೇಳಿದ್ದಾರೆ.
ಮಾರ್ಗರೆಟ್ ಚಿತ್ತ ಬಿಎಸ್‌ಪಿಯತ್ತ? ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ಪ್ರಮುಖ ಸ್ಥಾನದಲ್ಲಿ ವಿರಾಜಮಾನರಾಗಿರುವ ಮಾರ್ಗರೆಟ್ ಆಳ್ವ ಅವರ ಮನಸ್ಸೀಗ ಬಿಎಸ್‌ಪಿಯತ್ತ ಹರಿದಿದೆ ಎಂದು ಹೇಳಲಾಗುತ್ತಿದೆ. ಅವರು ಮಾಯಾವತಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ.
ಈ ಹಿನ್ನೆಲೆಯಲ್ಲೇ ಮಾರ್ಗರೆಟ್ ಆಳ್ವ ಇದ್ದಕ್ಕಿದ್ದಂತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
|