ಹೀನ ಅಪರಾಧಗಳನ್ನು ಹೊರತು ಪಡಿಸಿ ಸಣ್ಣಪುಟ್ಟ ಅಪರಾಧಗಳಿಗೆ ಜಾಮೀನು ನೀಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ವಿಚಾರಣೆ ಎದುರಿಸುತ್ತಿರುವವರನ್ನು ಜೈಲಿನಲ್ಲಿ ತುಂಬಿಡುವುದನ್ನು ವಿರೋಧಿಸುವುದಾಗಿ ಮುಖ್ಯನ್ಯಾಯ ಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಸಿ.ಕೆ.ತಕ್ಕರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಬಾಬಾ ಅಮ್ರಿಕ್ ಎಂಬಾತ ಆಭರಣ ತಯಾರಿಸುವ ವೇಳೆಗೆ ಚಿನ್ನ ನುಂಗಿಹಾಕಿದ್ದಾನೆ ಎಂಬ ಆರೋಪದ ಮೇಲೆ ಕಳೆದ ವರ್ಷದ ಜನವರಿಯಿಂದ ಜೈಲುವಾಸ ಅನುಭವಿಸುತ್ತಿದ್ದ. ಈತನಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಸಣ್ಣಪುಟ್ಟ ಅಪರಾಧಗಳ ಆರೋಪ ಹೊಂದಿರುವವರಿಗೆ ಜಾಮೀನು ನೀಡುವ ಕುರಿತು ಒಲವು ವ್ಯಕ್ತಪಡಿಸಿದೆ.
ಇದರಿಂದಾಗಿ ಜೈಲಿನ ದಟ್ಟಣೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಣ್ಣಪುಟ್ಟ ಅಪರಾಧಗಳಿಗಾಗಿ ನೀವು ಅರೋಪಿಗಳನ್ನು ಸುದೀರ್ಘಕಾಲ ಜೈಲಿನಲ್ಲಿರಿಸಿ ಅವರು ತೀರ್ಪು ಸಿಗುವ ತನಕ ಜೈಲಿನಲ್ಲಿ ಕೊಳೆಯುವಂತೆ ಮಾಡುವಂತಿಲ್ಲ ಎಂದು ನ್ಯಾಯಾಮೂರ್ತಿ ಬಾಲಕೃಷ್ಣನ್ ಅವರು ಹೇಳಿದ್ದಾರೆ.
ವಿಚಾರಣಾಧಿನ ಅರೋಪಿಗಳನ್ನು ಜೈಲಿನಲ್ಲಿ ಇರಿಸಿಕೊಳ್ಳಲು ನ್ಯಾಯಾಲಯ ವಿರೋಧ ವ್ಯಕ್ತಪಡಿಸಿರುವುದು ವಿವಿಧ ಜೈಲಿನಲ್ಲಿರುವ ಸುಮಾರು ಎರಡು ಲಕ್ಷಕ್ಕಿಂತಲೂ ಅಧಿಕ ವಿಚಾರಣಾಧೀನ ಕೈದಿಗಳಲ್ಲಿ ಆಶಾಕಿರಣವನ್ನು ಮೂಡಿಸಿದೆ.
ರಾಷ್ಟ್ರೀಯ ಅಪರಾಧಿ ದಾಖಲೆಗಳ ಬ್ಯೂರೋದ 2006ರ ಅಂಕಿಅಂಶಗಳ ಪ್ರಕಾರ ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳಲ್ಲಿ ಸುಮಾರು 54,000 ಮಂದಿ ಕೊಲೆ ಆರೋಪಿಗಳು. ಕಳ್ಳತನ ಮತ್ತು ಕೊಲೆಯತ್ನ ಪ್ರಕರಣಗಳಲ್ಲಿ ಅನುಕ್ರಮವಾಗಿ 23,434 ಮತ್ತು 22,526 ಮಂದಿ ವಿಚಾರಾಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ ಎಂದು ಅಂಕಿಅಂಶಗಳು ಹೇಳಿವೆ. |