ಮುಸ್ಲಿಮರಲ್ಲಿ ಬಹುಪತ್ನಿತ್ವ ನಿಯಂತ್ರಿಸುವಂತೆ ಮತ್ತು 'ತಲಾಖ್' ಮೂಲಕ ವಿವಾಹ ವಿಚ್ಛೇದನ ದುರ್ಬಳಕೆ ತಡೆಗೆ ಕಾಯ್ದೆಯೊಂದನ್ನು ಜಾರಿಗೆ ತರಲು ಕೇರಳದ ಕಾನೂನು ಸುಧಾರಣಾ ಆಯೋಗ ಮುಂದಾಗಿದೆ.
ರಾಷ್ಟ್ರಾದ್ಯಂತ ವಿವಾದದ ಕಿಡಿಹೊತ್ತಿಸಲಿರುವ ಈ ಶಾಸನದ ಕರಡನ್ನು ರೂಪಿಸಿರುವ ಖ್ಯಾತ ನ್ಯಾಯಾಂಗ ತಜ್ಞ ವಿ.ಆರ್.ಕೃಷ್ಣ ಅಯ್ಯರ್ ಅವರು, "ಕೇರಳದಲ್ಲಿ ಏಕಪತ್ನಿತ್ವವು ಸಾಮಾನ್ಯ ಕಾನೂನು ಮತ್ತು ಬಹುಪತ್ನಿತ್ವವು ಒಂದು ಅಪವಾದ" ಎಂಬ ಕಾನೂನು ಜಾರಿಗೆ ತರಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸರ್ಕಾರಕ್ಕೆ ಸದ್ಯವೇ ಸಲ್ಲಿಸಲಿರುವ ಈ ಕರಡಿನಲ್ಲಿ, ಬಹುಪತ್ನಿತ್ವವನ್ನು ಕೆಲವು ಸಾಮಾಜಿಕ ವಿನಾಯಿತಿ ಸಂದರ್ಭಗಳಲ್ಲಿ ಮಾತ್ರ ಅನುಮತಿ ನೀಡಬೇಕು. ಅದೂ ಸಹ ಸಹಾನುಭೂತಿಯ ಸಂದರ್ಭಗಳಲ್ಲಿ ಮಾತ್ರ ಎಂದು ಪ್ರತಿಪಾದಿಸಲಾಗಿದೆ.
ಕೇರಳ ಮುಸ್ಲಿಂ ವಿವಾಹ ಮತ್ತು ತಲಾಖ್ ಮೂಲಕ ವಿಚ್ಛೇದನ(ನಿಯಂತ್ರಣ) ಮಸೂದೆ ಎಂಬ ಹೆಸರಿನ ಈ ಮಸೂದೆಯಲ್ಲಿ ಬಹುಪತ್ನಿತ್ವ ಮತ್ತು ವಿಚ್ಛೇದನ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜೀಸಂಧಾನ ಸಲಹೆಗಳನ್ನು ಒದಗಿಸಲು ಈ ಮಸೂದೆ ಸಲಹೆ ಮಾಡಿದೆ.
ಈ ಪ್ರಸ್ತಾಪವನ್ನು ಮಹಿಳಾ ಹಕ್ಕುಗಳ ಕಾರ್ಯಕರ್ತರು ಬೆಂಬಲಿಸಿದ್ದರೆ, ಕೆಲವು ಪ್ರಭಾವೀ ಇಸ್ಲಾಮಿಕ್ ಸಂಘಟನೆಗಳು ಮತ್ತು ಧಾರ್ಮಿಕ ಪಂಡಿತರು ಇದನ್ನು ವಿರೋಧಿಸಿದ್ದು, ಇದು ಧಾರ್ಮಿಕ ಹಕ್ಕುಗಳು ಮತ್ತು ಸಂವಿಧಾನಬದ್ದ ಹಕ್ಕುಗಳ ಮೇಲೆ ಸವಾರಿ ಎಂದು ಹೇಳಿವೆ.
ವಿಚ್ಛೇದನ ನೀಡುವುದಾದಲ್ಲಿ, ವಿಶೇಷ ಪರಿಸ್ಥಿಗಳಲ್ಲಿ ಮಾತ್ರ ತಲಾಖ್ ಅನ್ನು ಪರಿಗಣಿಸಬೇಕು ಮತ್ತು, ಮೊದಲ ವಿವಾಹ ಚಾಲ್ತಿಯಲ್ಲಿ ಇರುವಾಗಲೇ ಯಾವುದೇ ಮುಸ್ಲಿಂ ಪುರುಷ ಅಥವಾ ಮಹಿಳೆ ವಿವಾಹವಾದಲ್ಲಿ ಅವರು ಭಾರತೀಯ ದಂಡ ಸಂಹಿತೆ(ಐಪಿಸಿ) ಪ್ರಕಾರ ಬಹುಪತ್ನಿತ್ವ ಅಪರಾಧಕ್ಕೀಡಾಗುತ್ತಾರೆ ಮತ್ತು ಶಿಕ್ಷೆಗೆ ಆರ್ಹರು ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.
ಅದೇನೇ ಇದ್ದರೂ, ಒರ್ವ ಪತಿ, ತನ್ನ ಮೊದಲ ಪತ್ನಿಯು ವಿವಾಹಕ್ಕೆ ನೋಟರಿ ಅಥವಾ ನ್ಯಾಯಾಂಗ ಅಧಿಕಾರಿಯ ಮುಂದೆ ಲಿಖಿತ ಒಪ್ಪಿಗೆ ನೀಡಿದಲ್ಲಿ ಎರಡನೆ ವಿವಾಹವಾಗಬಹುದಾಗಿದೆ. ಅಲ್ಲದೆ ಮೊದಲ ಪತ್ನಿಯು ವಿವಾಹಕ್ಕೆ ಒಪ್ಪಿಗೆ ನೀಡಲು ಕಾರಣವನ್ನೂ ನೀಡುವಂತೆ ಕರಡಿನಲ್ಲಿ ಒತ್ತಾಯಿಸಲಾಗಿದೆ. |