ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬರಾಕ್ ಒಬಾಮರ ನೀತಿಗಳ ಬಗ್ಗೆ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನಿರಿಸಲಿದೆ ಎಂಬುದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರ ಮಾತುಗಳಿಂದ ಸ್ಪಷ್ಟವಾಗಿದೆ. ಕಾಶ್ಮೀರ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿವಾದ ಎಂದು ಮುಖರ್ಜಿ ಸಷ್ಟಪಡಿಸಿದರು. ಕಾಶ್ಮೀರ ವಿವಾದದ ಬಗ್ಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಒಬಾಮ ಸಲಹಾಕಾರರನ್ನಾಗಿ ನೇಮಿಸುವ ವರದಿಗಳ ಬಗ್ಗೆ , ಭಾರತದ ನಿಲುವಿನಂತೆ ಕಾಶ್ಮೀರ ವಿವಾದದ ಬಗ್ಗೆ ಪರಿಹಾರ ಪಡೆದುಕೊಳ್ಳಲು ಇರುವ ಏಕೈಕ ಮಾನದಂಡ ಶಿಮ್ಲಾ ಒಪ್ಪಂದ ಎಂದು ಅವರು ಹೇಳಿದರು.ಪ್ರಸಕ್ತ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಒಬಾಮ ಅವರ ನಡೆಯ ಕುರಿತು ಭಾರತ 'ವೈಟ್ ಆಂಡ್ ವಾಚ್' ನೀತಿಯನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು. ಅಮೆರಿಕಾದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಬಾಮ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಅವರ ಅಂತರಿಕ ವಿಷಯ ಎಂದ ವಿದೇಶಾಂಗ ಸಚಿವರು ಅವರ ಹೊಸ ಆರ್ಥಿಕ ನೀತಿ ವಿಶ್ವ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಗಮನಿಸಬೇಕಾಗಿರುವ ಅಂಶ ಎಂದು ಹೇಳಿದರು.ಕಲ್ಕತ್ತಾದಲ್ಲಿ ಭಾರತೀಯ ವಾಣಿಜ್ಯ ಮಂಡಳಿ ಅಯೋಜಿಸಿರುವ ಚರ್ಚಾಗೋಷ್ಠಿಯಲ್ಲಿ ಪ್ರಣಬ್ ಮುಖರ್ಜಿ ಮಾತನಾಡುತ್ತಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ ಭಟ್ಟಾಚಾರ್ಜಿ ಸಹ ಉಪಸ್ಥಿತರಿದ್ದರು. |