ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖಾ ದಾರಿ ಈಗ ಗುಜರಾತಿನ ಸ್ವಾಮಿ ಅಸಿಮಾನಂದ ಆಶ್ರಮದತ್ತ ಹೊರಳಿದೆ. ಆಶ್ರಮದೊಡನೆ ಸಂಬಂಧ ಹೊಂದಿರುವ ನಾಲ್ವರು ವ್ಯಕ್ತಿಗಳನ್ನು ಭಯೋತ್ಪಾದನಾ ನಿಗ್ರಹ ದಳವು(ಎಟಿಎಸ್) ಭಾನುವಾರ ಪ್ರಶ್ನಿಸಿದೆ.
ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಹಾಗೂ ಸ್ವಾಮಿ ಅಸಿಮಾನಂದರೊಂದಿಗೆ ಸಂಪರ್ಕವಿದೆ ಎಂಬ ಸುದ್ದಿ ಹೊರಬೀಳುತ್ತಿರುವಂತೆ ಆಶ್ರಮದಲ್ಲಿ ಸ್ವಾಮಿ ಅಸಿಮಾನಂದರ ಕೊಠಡಿಗೆ ಬೀಗ ಹಾಕಲಾಗಿದೆ. ಸಾಧ್ವಿ ಅವರ ದೂರವಾಣಿ ಕರೆಗಳ ದಾಖಲೆಗಳ ಪ್ರಕಾರ ಸಾಧ್ವಿಗೆ ಸ್ವಾಮಿಜಿ ಜತೆಗೆ ಸಂಪರ್ಕ ಇದ್ದಿರುವುದು ದೃಢವಾಗಿದೆ.
ಅಸಿಮಾನಂದ ಅವರು ಸ್ಥಾಪಿಸಿರುವ ವಾಗಾಯ್‌ಯಲ್ಲಿರುವ ದಂಡಕಾರಣ್ಯ ವನವಾಸಿ ಹಾಸ್ಟೆಲ್‌ಗೆ ತೆರಳಿರುವ ಪೊಲೀಸರು, ಸ್ವಾಮಿಯ ಚಾಲಕನಾಗಿದ್ದು ಬಳಿಕ ಖಚಾಂಚಿಯಾಗಿ ಭಡ್ತಿಗೊಂಡಿರುವ ಸುನಿಲ್ ದಹವಾಡ್‌ರನ್ನು ಪ್ರಶ್ನಿಸಿದ್ದಾರೆ.
ಸ್ವಾಮಿ, ಸುನಿಲ್ ಅವರ ಸಿಮ್ ಕಾರ್ಡ್ ಬಳಸಿ ಸಾಧ್ವಿಜತೆ ಸಂಭಾಷಣೆ ನಡೆಸಿದ್ದಾರೆ ಎಂದು ಎಟಿಎಸ್ ಮೂಲಗಳು ಹೇಳುತ್ತಿವೆ. ಆದರೆ, ಆ ಪ್ರದೇಶದ ನಿವಾಸಿಗಳಿಗೆ ಸ್ವಾಮಿ ಅಸಿಮಾನಂದ ಅವರು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದಾರೆ ಎಂಬ ವಿಚಾರ ಅರಗಿಸಿಕೊಳ್ಳಲು ಕಷ್ಟಕರವಾಗುತ್ತಿದೆ. ಅವರು ದೇವರನ್ನು ನಂಬುವ ವ್ಯಕ್ತಿ ಅವರು ಇಂತಹ ಕೃತ್ಯಗಳಲ್ಲಿ ತೊಡಗಲು ಸಾಧ್ಯವಿಲ್ಲ ಎಂದು ಹಿರಾಜಿ ಕಾಮಾರ್ ಎಂಬ ಆಶ್ರಮದ ನೆರೆಯ ವ್ಯಕ್ತಿ ಹೇಳುತ್ತಾರೆ. |