ಭಯೋತ್ಪಾದನೆಯಲ್ಲಿ ಜಿಹಾದ್ ಪದವನ್ನು ತಪ್ಪಾಗಿ ಗುರುತಿಸಲ್ಪಡುತ್ತಿರುವ ಕಾರಣ 'ಜಿಹಾದ್' ಶಬ್ದವನ್ನು ಮರುವ್ಯಾಖ್ಯಾನಿಸಲು ಮುಸ್ಲಿಂ ಪಂಡಿತರು ಕರೆ ನೀಡಿದ್ದಾರೆ. ಹೈದರಾಬಾದಿನಲ್ಲಿ ಭಾನುವಾರ ನಡೆದ ರಾಷ್ಟ್ರದ ಪ್ರಮುಖ ಇಸ್ಲಾಂ ಪಂಡಿತರು ಭಾಗವಗಿಸಿದ್ದ ಬೃಹತ್ ಸಮಾವೇಶದಲ್ಲಿ ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಅವರೂ ಮುಸ್ಲಿಂ ಹಾಗೂ ಭಯೋತ್ಪಾದನೆಯ ಸಂಪರ್ಕ ಕಡಿಯುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದ್ದಾರೆ. ಜಮಾತೆ ಉಲೇಮಾ ಐ ಹಿಂದ್ ಈ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು.
ಉಗ್ರವಾದವನ್ನು ತೊಡೆದು ಹಾಕಲು ಅನುಸರಿಸಬೇಕಿರುವ ಅಂಶಗಳನ್ನು ಪಟ್ಟಿ ಮಾಡಿರುವ ರವಿಶಂಕರ್ ಅವರು, ಭಯೋತ್ಪಾದಕರನ್ನು ಪ್ರತ್ಯೇಕವಾಗಿಸಬೇಕು ಎಂದು ನುಡಿಯುತ್ತಾ "ನಮ್ಮದೇ ಕುಟುಂಬದ ಸದಸ್ಯನೇ ಭಯೋತ್ಪಾದನೆಯಲ್ಲಿ ತೊಡಗಿದ್ದರೂ ಆತನನ್ನು ಪ್ರತ್ಯಕವಾಗಿಸಿ ಉಚ್ಚಾಟಿಸಬೇಕು" ಎಂದು ಸಮಾವೇಶದಲ್ಲಿ ಮಾತನಾಡುತ್ತಾ ನುಡಿದರು. ಸಮಾವೇಶದಲ್ಲಿ ಉಗ್ರವಾದವನ್ನು ಖಂಡಿಸುವ ಠರಾವನ್ನು ಪಾಸುಮಾಡಲಾಯಿತು.
ಶಾಂತಿಯ ಹಾಗೂ ಮಾನವರ ಮೂಲಭೂತ ಹಕ್ಕುಗಳ ಮರುಸ್ಥಾಪನೆಗೆ ಮಾತ್ರ ಜಿಹಾದ್ ಬಳಸಬಹುದಾಗಿದೆ. ಭಯೋತ್ಪಾದನೆಯು ಖುರಾನ್ ಮತ್ತು ಇಸ್ಲಾಂ ಮೌಲ್ಯಗಳಿಗೆ ವಿರೋಧವಾಗಿದ್ದು ಅತಿದೊಡ್ಡ ಪಾಪವಾಗಿದೆ ಎಂದು ಠರಾವಿನಲ್ಲಿ ಹೇಳಲಾಗಿದೆ.
ಉಗ್ರವಾದವು ದೌರ್ಜನ್ಯ ಮತ್ತು ಭಯವನ್ನು ಹುಟ್ಟುಹಾಕುತ್ತದೆ. ಇದು ಪರಸ್ಪರ ಕೊಲೆಗೆ ಪ್ರೇರೇಪಣೆ ನೀಡುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತದೆ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಕೆಡಿಸುತ್ತದೆ ಎಂದು ಅದರಲ್ಲಿ ಹೇಳಲಾಗಿದೆ.
ಸಮಾವೇಶದಲ್ಲಿ 24 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಇದರಲ್ಲಿ ಮುಸ್ಲಿಮರ ಶಿಕ್ಷಣದ ವಿಚಾರವೂ ಸೇರಿದೆ. ಮುಸ್ಲಿಮರು ಶಾಲೆ ಮತ್ತು ಕಾಲೇಜುಗಳನ್ನು ಸ್ಥಾಪಿಸಿ ಅಸ್ತಿತ್ವದಲ್ಲಿರುವ ಆಧುನಿಕ ಪಠ್ಯಕ್ರಮವನ್ನು ಮಾತ್ರ, ಧಾರ್ಮಿಕ ಅಧ್ಯಯನಗಳ ಕುರಿತ ವಿಶೇಷ ಸವಲತ್ತುಗಳನ್ನು ಒದಗಿಸುವ ಮೂಲಕ ನೀಡಬೇಕು ಎಂದು ಎಂಬ ನಿರ್ಣಯವನ್ನು ಮುಸ್ಲಿಂ ಪಂಡಿತರು ಕೈಗೊಂಡಿದ್ದಾರೆ. |