ತನ್ನ ಒಡತಿಯ ನೆರೆಮನೆಯವರಿಗೆ ಕಚ್ಚಿದ್ದಕ್ಕಾಗಿ 'ಮರಣದಂಡನೆ'ಗೆ ಗುರಿಯಾಗಿ, ಪ್ರಾಣಿ ದಯಾ ಸಂಘ ಹೋರಾಟಗಾರರ ಮಧ್ಯಸ್ಥಿಕೆಯಿಂದ ಬಚಾವ್ ಆಗಿದ್ದ ಶ್ವಾನವೊಂದು ಮತ್ತೆ ನ್ಯಾಯಾಲಯದ 'ಕಟಕಟೆ' ಏರಿದೆ!
2003ರಲ್ಲೊಮ್ಮೆ ಮೊದಲ ಬಾರಿಗೆ ತೊಂದರೆಯಲ್ಲಿ ಸಿಲುಕಿದ್ದ 'ಚೋಟು' ಮತ್ತೊಮ್ಮೆ ವಾದ-ವಿವಾದದ ಕೇಂದ್ರ ಬಿಂದುವಾಗಿದೆ. ತನ್ನ ಜಮೀನು ಕಾಯಲೆಂದು ಭಟ್ಟಾತಾತ್ಮ ತೋಲಿ ಪ್ರದೇಶದಲ್ಲಿ ಜಾನಕಿ ದೇವಿ ಎಂಬಾಕೆ ಈ ಚೋಟು ಎಂಬ ನಾಯಿಯನ್ನು ಸಾಕಿದ್ದರು.
ತನ್ನ ನೆರೆಮನೆಯಾತ ಶಿವ ದಾಸ್, ಈ ನಾಯಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಜಾನಕಿ ದೇವಿ ಪೊಲೀಸರಿಗೆ ದೂರು ನೀಡಿದ್ದಳು. ಈ ನಾಯಿ ತನ್ನ ಮಗನನ್ನು ಕಚ್ಚಿತು ಎಂಬುದು ಶಿವ ದಾಸ್ ಆರೋಪವಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಸಾಮಾಜಿಕ ಶಾಂತಿ ಕೆಡಿಸುವ ಆರೋಪದಲ್ಲಿ ಜಾನಕಿ ದೇವಿ ಮತ್ತು ಶಿವ ದಾಸ್ ಇಬ್ಬರ ಮೇಲೂ ಸಿಆರ್‌ಪಿಸಿ ಸೆಕ್ಷನ್ 107ರ ಪ್ರಕಾರ ಕೇಸು ದಾಖಲಿಸಿದ್ದಾರೆ.
ಗಲಾಟೆಗೆ ಸಂಬಂಧಿಸಿದಂತೆ ಚೋಟುವಿಗೆ ಉಪ ವಿಭಾಗೀಯ ಅಧಿಕಾರಿ ಜಿತೇಂದ್ರ ಪ್ರಸಾದ್ ಎಂಬವರು 'ಮರಣ ದಂಡನೆ' ವಿಧಿಸಿ ತೀರ್ಪು ನೀಡಿದ್ದರು. ಬಳಿಕ ಪ್ರಾಣಿದಯಾ ಸಂಘಗಳ ಮಧ್ಯಸ್ಥಿಕೆಯಿಂದ ಅದು ರದ್ದುಗೊಂಡಿತ್ತು.
ಇದೀಗ, ಶಿವದಾಸ್‌ನ ಭಾವಮೈದುನ ಕುಟುಂಬಿಕರನ್ನು ಚೋಟುವು ಕಚ್ಚಿಬಿಟ್ಟಿದೆ ಎಂದು ಆರೋಪಿಸಲಾಗಿದೆ ಎಂಬುದು ಚೋಟು ಪರ ವಕೀಲ ದಿಲೀಪ್ ಕುಮಾರ್ ದೀಪಕ್ ಹೇಳಿಕೆ. ಜಾನಕಿ ದೇವಿ ಎರಡು ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ಆಕೆಯ ಪುತ್ರಿ ರಾಜಕುಮಾರಿ ಮತ್ತು ಕುಸುಮ್ ಎಂಬವರು ಈ ನಾಯಿಯನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ಈ ಬಾರಿ ಈ ನಾಯಿಯ ವಿಚಾರಣೆ ನಡೆಸಿದ್ದು ಉಪವಿಭಾಗೀಯ ಅಧಿಕಾರಿ ಸುಧಾ ದತ್ತಾತ್ರೇಯ ಠಾಕರೆ.
"ಚೋಟು ಯಾವತ್ತೂ ಯಾರಿಗೂ ಕಚ್ಚುವುದಿಲ್ಲ. ಆತ ತನ್ನ ಒಡೆಯರ ಆಸ್ತಿಯನ್ನು ರಕ್ಷಣೆ ಮಾಡುತ್ತಿರುತ್ತದೆ. ಅದು ಕಚ್ಚುವುದು ನಿಜವೇ ಆಗಿದ್ದಲ್ಲಿ, ಪದೇ ಪದೇ ತಾನು ಭೇಟಿ ನೀಡುತ್ತಿರುವ ಮತ್ತು ಗಂಟೆಗಟ್ಟಲೆ ತನ್ನ ಸರದಿಗಾಗಿ ಕಾಯಬೇಕಿರುವ ನ್ಯಾಯಾಲಯದಲ್ಲೇ ಯಾರಿಗಾದರೂ ಕಚ್ಚಬೇಕಿತ್ತಲ್ಲ" ಎಂಬುದು ದೀಪಕ್ ವಾದ.
ಇದೀಗ ಚೋಟು ಮತ್ತೆ ನವೆಂಬರ್ 14ರಂದು ನ್ಯಾಯಾಲಯದ ಮೆಟ್ಟಿಲೇರಬೇಕಿದ್ದು, ಆ ದಿನ ಈ ಕೇಸಿನ ಮುಂದುವರಿದ ವಿಚಾರಣೆ ನಡೆಯಲಿದೆ. |