ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಟಿಕೆಟ್‌ಗಳು ಮಾರಾಟವಾಗಿದ್ದವು ಎಂಬ ಗಂಭೀರ ಆರೋಪ ಮಾಡಿ ಗದ್ದಲವೆಬ್ಬಿಸಿರುವ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಅವರು ಕಾರ್ಯಕಾರಿ ಸಮಿತಿಗೂ ರಾಜೀನಾಮೆ ನೀಡಿದ್ದಾರೆ.
ಆಳ್ವಾ ತನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿದ್ದಾರೆನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ. ಪಕ್ಷವು ರಾಜೀನಾಮೆಯನ್ನು ಸ್ವೀಕರಿಸಿದೆಯೇ ಎಂಬುದೂ ತಿಳಿದುಬಂದಿಲ್ಲ.
ಆಳ್ವ ಅವರು ಶಿಸ್ತು ಸಮಿತಿ ಮುಖಂಡ ಎ.ಕೆ.ಆಂಟನಿಯವರನ್ನು ಭೇಟಿ ಮಾಡಿದ ಬಳಕ ಅವರ ವಿರುದ್ಧದ ಶಿಸ್ತುಕ್ರಮ ವಿಚಾರವನ್ನು ಸೋಮವಾರ ಮುಂದೂಡಲಾಗಿತ್ತು. ಈ ವಿಚಾರವನ್ನು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಅವರು ಘೋಷಿಸಿದ್ದರು.
ಮಾರ್ಗರೆಟ್ ಆಳ್ವ ಅವರ ಹೇಳಿಕೆಯನ್ನು ಪಕ್ಷದ ಹಿಂದುಳಿದ ಜಾತಿ ಮುಖಂಡ ಸಿದ್ದರಾಮಯ್ಯ, ಸಂಸದ ಆರ್.ಎಲ್.ಜಾಲಪ್ಪ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಅಧ್ಯಕ್ಷ ಯೋಗೇಂದ್ರ ಮಕ್ವಾನ ಅವರು ಬೆಂಬಲಿಸಿದ್ದುರು.
ಆರು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿರುವ ಕಾರಣ ಯಾವುದೇ ವಿವಾದದಲ್ಲಿ ಸಿಲುಕಲು ಇಷ್ಟಪಡದ ಪಕ್ಷವು ಜಾಗರೂಕ ಹೆಜ್ಜೆಯನ್ನು ಮುಂದಿಡಲು ಬಯಸುವಂತೆ ತೋರುತ್ತಿದೆ.
|