ಸದ್ಯದಲ್ಲಿ ಪೆಟ್ರೋಲಿಯಂ ಬೆಲೆ ಕಡಿತ ಸಾಧ್ಯತೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ತಳ್ಳಿ ಹಾಕಿದ್ದಾರೆ. ಕೊಲ್ಲಿ ರಾಷ್ಟ್ರಗಳ ಭೇಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ, ತಾನು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇನ್ನಷ್ಟು ಕಡಿತ ಉಂಟಾದಲ್ಲಿ ಮಾತ್ರ ಪೆಟ್ರೋಲಿಯಂ ದರಕಡಿತವನ್ನು ಖಚಿತಪಡಿಸಬಹುದು" ಎಂದು ಅವರು ನುಡಿದರು.ಭಾರತೀಯ ತೈಲ ಕಂಪೆನಿಗಳು ಅತಿದೊಡ್ಡ ಭಾರವನ್ನು ಹೊತ್ತಿದ್ದು, ಅವುಗಳು ತಮ್ಮಷ್ಟಕ್ಕೆ ಸ್ಥಿರವಾಗಬೇಕಿದೆ ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.ಸರ್ಕಾರವು ಇನ್ನೂ ಸೀಮೆಎಣ್ಣೆ, ಹಾಗೂ ಅನಿಲದರಗಳಿಗೆ ಭಾರೀ ಸಹಾಯಧನ ನೀಡುತ್ತಿದೆ ಎಂದು ಅವರು ತಿಳಿಸಿದರು.ಎಟಿಫ್ ದರ ಇಳಿಸಬೇಕು ಎಂಬ ವಿಮಾನಯಾನ ಕಂಪೆನಿಗಳ ಒತ್ತಡದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಸಿಂಗ್, ವಿಮಾನಯಾನ ಸಂಸ್ಥೆಗಳು ಮುಚ್ಚುಗಡೆಯಾದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಲಿದೆ ಎಂದು ನುಡಿದರು.ಯಾವುದೇ ಏರ್‌ಲೈನ್ ಕಂಪೆನಿಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸರ್ಕಾರ ಇಚ್ಛಿಸುವುದಿಲ್ಲ. ಈ ಸಂಸ್ಥೆಗಳು ಅವುಗಳಷ್ಟಕೆ ಸ್ಥಿರವಾಗಬೇಕಿದೆ ಮತ್ತು ನಿರುದ್ಯೋಗ ಸಮಸ್ಯೆಯೂ ಇರಬಾರದು ಎಂದು ಮನಮೋಹನ್ ಸಿಂಗ್ ನುಡಿದರು. |