ಬಿಹಾರದ ಜನತೆಯ ಪ್ರತಿಷ್ಠೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿರುವ ರೈಲ್ವೇ ಸಚಿವ ಹಾಗೂ ಆರ್‌ಜೆಡಿ ವರಿಷ್ಠ ಲಾಲೂಪ್ರಸಾದ್ ಯಾದವ್ ಅವರು, ತಾನೂ ಕೇಂದ್ರ ಸಂಪುಟದಿಂದ ಹೊರನಡೆಯಲು ಸಿದ್ಧ ಎಂದು ಹೇಳಿದ್ದಾರೆ.
ಅವರು ಸೋಮವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ರಾಷ್ಟ್ರಾದ್ಯಂತವಿರುವ ಬಿಹಾರಿಗಳು ಗೌರವದ ರಕ್ಷಣೆಗಾಗಿ ರಾಷ್ಟ್ರಾದ್ಯಂತ ಪ್ರತಿಭಟನೆಯನ್ನು ನಡೆಸಲು ಬಿಹಾರದ ಎಲ್ಲಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಬೇಕು ಎಂದು ಅವರು ಕೆಲವು ದಿನಗಳ ಹಿಂದೆ ಕರೆ ನೀಡಿದ್ದರು.
ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಡಿ ಬಂದು ರಾಜಕಿಯೇತರ ಸಂಘಟನೆಯನ್ನು ಸ್ಥಾಪಿಸಿ, ಬಿಹಾರಿಗಳ ಸುರಕ್ಷತೆಗಾಗಿ ಅಖಿಲ ಭಾರತೀಯ ಹೋರಾಟ ಹಮ್ಮಿಕೊಳ್ಳಬೇಕು ಎಂದು ಲಾಲೂ ಒತ್ತಾಯಿಸಿದರು.
"ಬಿಹಾರದ ಎಲ್ಲ ರಾಜಕಾರಣಿಗಳು ರಾಜೀನಾಮೆ ನೀಡಬೇಕು ಎಂಬ ನನ್ನ ವಿನಂತಿಯು ಪ್ರತ್ಯೇಕತೆ, ಹಾಗೂ ಕೋಮುವಾದದ ವಿರುದ್ಧ ಹೋರಾಡುವ ಉದ್ದೇಶವನ್ನೂ ಹೊಂದಿದೆ. ಆದರೆ ನಿತೀಶ್ ಕುಮಾರ್ ಅವರು ತಮ್ಮ ಕುರ್ಚಿಯ ಚಿಂತೆಯಲ್ಲಿದ್ದಾರೆ" ಎಂದು ಅವರು ಹೇಳಿದ್ದಾರೆ. ತನ್ನ ರಾಜೀನಾಮೆಯ ಬಳಿಕ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಲಾಲೂ ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರದಂತೆ ಹೊಸ ಸೂತ್ರವೊಂದನ್ನು ಮುಂದಿಟ್ಟಿರುವ ಲಾಲೂ, ತಾನು ಕೇಂದ್ರ ಸಂಪುಟವನ್ನು ತ್ಯಜಿಸಲು ಸಿದ್ದವಾಗಿರುವಾಗ, ನಿತೀಶ್ ಕುಮಾರ್ ಅವರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. |