ಚಂದ್ರಗ್ರಹದ ಸಂಪೂರ್ಣ ಅಧ್ಯಯನಕ್ಕಾಗಿ ಹಾರಿ ಬಿಡಲಾಗಿರುವ ಮಾನವರಹಿತ ಬಾಹ್ಯಾಕಾಶ ನೌಕೆ ಚಂದ್ರಯಾನ-1ಕ್ಕೆ ಸೂಚನೆಗಳನ್ನು ನೀಡುತ್ತಿರುವ ವಿಜ್ಞಾನಿಗಳು, ನೌಕೆಯನ್ನು ಚಂದ್ರನ ಮತ್ತಷ್ಟು ಸಮೀಪಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯನ್ನು ಭಾನುವಾರ ರಾತ್ರಿ 8.03 ಗಂಟೆಗೆ ನಡೆಸಲಾಗಿದ್ದು, ನೌಕೆಗೆ ಅಳವಡಿಸಿರುವ 440 ನ್ಯೂಟನ್ ದ್ರವ ಇಂಜಿನನ್ನು ಸುಮಾರು 57 ಸೆಕುಂಡುಗಳ ಕಾಲ ಉರಿಸುವ ಮೂಲಕ ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿತು ಎಂದು ಭಾರತೀಯ ಬಾಹ್ಯಾಕಾಶ ಅಧ್ಯಯನ ಕೇಂದ್ರ(ಇಸ್ರೋ) ನೀಡಿರುವ ಪತ್ರಿಕಾ ಹೇಳಿಕೆ ತಿಳಿಸಿದೆ.
ಈ ಕಾರ್ಯದಿಂದಾಗಿ ಚಂದ್ರನ ಇನ್ನಷ್ಟು ಸಮೀಪಕ್ಕೆ, ಸಮೀಪಿಸಿರುವ ಚಂದ್ರಯಾನವು 200ಕಿ.ಮೀ ಅಂತರದಿಂದ ಕಾರ್ಯ ನಿರ್ವಹಿಸಲಿದೆ. ಶನಿವಾರದ ಕಾರ್ಯಾಚರಣೆಯ ವೇಳೆಗೆ ನೌಕೆಯು 504 ಕಿ.ಮೀ. ಅಂತರದತ್ತ ಚಲಿಸಿತ್ತು. ಚಂದ್ರನ ಕಕ್ಷೆಯ ದೂರದ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿಕೆ ತಿಳಿಸಿದೆ.
ನೌಕೆಯನ್ನು ಅಂತಿಮ ಗುರಿ 100ಕಿ.ಮೀ ವ್ಯಾಪ್ತಿಗೆ ಚಲಾಯಿಸುವ ಕಾರ್ಯಾಚರಣೆಯು ಮುಂದಿನ ದಿನಗಳಲ್ಲಿ ನವೆಂಬರ್ 15ರೊಳಗಾಗಿ ನಡೆಯಲಿದೆ. ಇದಾದ ಬಳಿಕ ಚಂದ್ರನ ಮೇಲ್ಮೈ ಕುರಿತ ಶೋಧನೆ ಆರಂಭಗೊಳ್ಳಲಿದೆ ಮತ್ತು ಇತರ 10 ವೈಜ್ಞಾನಿಕ ಉಪಕರಣಗಳು ತಮ್ಮ ಕಾರ್ಯಾಚರಣೆಯನ್ನು ಆರಂಭಿಸಲಿವೆ.
ಇಲ್ಲಿಗೆ 45 ಕಿ.ಮೀ ದೂರದ ಬ್ಯಾಲಾಳುವಿನಲ್ಲಿ ಅಳವಡಿಸಲಾಗಿರುವ ಆಂಟೆನಗಳ ಮೂಲಕ ಬಾಹ್ಯಾಕಾಶ ನೌಕೆಯ ಆರೋಗ್ಯ ಮತ್ತು ಕಕ್ಷೆಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ವ್ಯೋಮನೌಕೆ ಚಂದ್ರಯಾನದ ಕಾರ್ಯಕ್ಷಮತೆ ಸಹಜವಾಗಿದೆ.
ಶನಿವಾರ ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ನೌಕೆಯು 7,502ಕಿ.ಮೀ ದೂರ ಹಾಗೂ 504ಕಿ.ಮೀ ಸಮೀಪದಲ್ಲಿ ಚಂದ್ರನ ಸುತ್ತ ವರ್ತುಲಾಕಾರದಲ್ಲಿ ಸುತ್ತುತ್ತಿತ್ತು. ಇದೀಗ ನೌಕೆಯು ಇನ್ನಷ್ಟು ಹತ್ತಿರದಲ್ಲಿ ಅಂದರೆ 200 ಕಿ.ಮೀ ಹಾಗೂ ಸಮೀಪಕ್ಕೆ ಸಾಗಿದ್ದು, ಸದ್ಯದಲ್ಲೇ 100 ಕಿ.ಮೀ ವ್ಯಾಪ್ತಿಗೆ ಸಾಗಲಿದೆ. ಅದರ ಪರಿಭ್ರಮಣದ ದೂರದ ವ್ಯಾಪ್ತಿಯು 7,502ಕಿ.ಮೀ ಆಗಿದೆ. |