ಸಂಸತ್ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ, ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿರುವಂತೆ ಕಾಂಗ್ರೆಸ್ ಪಕ್ಷದೊಳಗಿನ ಗೊಂದಲಗಳು, ಅಸಮಾಧಾನಗಳು ಬೀದಿಗೆ ಬಂದಿವೆ.
ಕರ್ನಾಟಕದ ವಿಧಾನಸಭಾ ಚುನಾವಣೆಗಳ ವೇಳೆ ಟಿಕೆಟ್‌ಗಳ ಮಾರಾಟವಾಗಿವೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದ ಆಕ್ರೋಶಗಳ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ರಾಜೀನಾಮೆ ನೀಡಿರುವಂತೆ ಪಕ್ಷದೊಳಗೆ ಪರ - ವಿರೋಧವೆಂಬ ಇಬ್ಬಾಗವಾಗಿದೆ.
ಪ್ರಸ್ತುತ ಚುನಾವಣೆಗೆ ಇತರ ಕಾಂಗ್ರೆಸ್ ನಾಯಕರ ಸಂಬಂಧಿಗಳಿಗೆ ಟಿಕೆಟ್ ನೀಡಿರುವ ಪಕ್ಷವು ಅನುಸರಿಸುವ ಮಾನದಂಡವನ್ನು ಆಳ್ವ ಪ್ರಶ್ನಿಸಿದ್ದು, ತನ್ನ ಪುತ್ರ ಹಾಗೂ ಮಾಜಿ ಸಚಿವ ಜಾಫರ್ ಶರೀಫ್ ಮೊಮ್ಮಗನಿಗೆ ಯಾಕೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪ್ರಶ್ನಿಸಿದ್ದರು.
ಮಹಾರಾಷ್ಟ್ರ, ಪಂಜಾಬ್, ಹರ್ಯಾಣ ಹಾಗೂ ಚುನಾವಣೆ ಘೋಷಣೆಯಾಗಿರುವ ಮಿಜೋರಾಂ ಸೇರಿದಂತೆ ಹಲವು ರಾಜ್ಯಗಳ ಉಸ್ತುವಾರಿಯಾಗಿದ್ದ 66ರ ಹರೆಯದ ಮಾರ್ಗರೆಟ್ ಆಳ್ವ, ಇದೀಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇವರ ಆರೋಪವನ್ನು ತಳ್ಳಿ ಹಾಕಿರುವ ಹೈಕಮಾಂಡ್ ಈ ಕುರಿತು ತನಿಖೆ ನಡೆಸುವುದಿಲ್ಲ ಎಂದು ಹೇಳಿತ್ತು. ಅಲ್ಲದೆ ಮಾಧ್ಯಮಗಳ ಮುಂದೆ ಅಸಮಾಧಾನ ತೋಡಿಕೊಂಡಿರುವುದರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದೂ ಹೇಳಿತ್ತು.
ಮಾರ್ಗರೆಟ್ ಆಳ್ವ ಅವರ ಹೇಳಿಕೆಯನ್ನು ಕೆಲವು ನಾಯಕರು ಹಾಸ್ಯಾಸ್ಪದ ಹಾಗೂ ಆಧಾರ ರಹಿತ ಎಂದು ತಳ್ಳಿಹಾಕಿದ್ದಾರಾದರೆ, ಇನ್ನು ಕೆಲವು ನಾಯಕರು ಆಳ್ವ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಹಿರಿಯ ಸಂಸದ ಆರ್.ಎಲ್. ಜಾಲಪ್ಪ ಅವರು, ಆಳ್ವರನ್ನು ಬೆಂಬಲಿಸಿದ್ದು, ಶೀಘ್ರವೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಪಿ.ಶಿವಕುಮಾರ್ ಹಾಗೂ ಹಿರಿಯ ನಾಯಕ ಯೋಗೇಂದ್ರ ಮಕ್ವಾನ ಅವರೂ ಆಳ್ವರನ್ನು ಬೆಂಬಲಿದ್ದಾರೆ. ಕಾಂಗ್ರೆಸ್ ಹಿಂದೆ ಇದ್ದಂತೆ ಈಗ ಇಲ್ಲ ಎಂದೂ ಮಕ್ವಾನ ಹೇಳಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಶಿಸ್ತು ಸಮಿತಿ ಮುಖ್ಯಸ್ಥ ಎ.ಕೆ.ಆಂಟನಿ ಅವರುಗಳು ಮಾತುಕತೆ ನಡೆಸಿದ್ದು ಇದರ ವಿವರಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿಲ್ಲ.
ಇಂದು ಸಭೆ ಮಾರ್ಗರೆಟ್ ಪ್ರಕರಣದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಸಭೆ ಸೇರಲಿದ್ದು, ನಿರ್ಣಯ ಒಂದನ್ನು ಕೈಗೊಳ್ಳಲು ಮುಂದಾಗಿದೆ.
|