ಜಲಾಂತರ್ಗಾಮಿಯಿಂದ ಉಡಾಯಿಸುವ ಕ್ಷಿಪಣಿ(ಎಸ್ಎಲ್‌ಬಿಎಂ)ಯನ್ನು ಭಾರತ ಬುಧವಾರದಂದು ಒರಿಸ್ಸಾದ ನೆಲಾಧಾರಿತ ಉಡ್ಡಯಕದ ಮುಖಾಂತರ ಪರಿಕ್ಷಾ ಉಡಾವಣೆ ನಡೆಸಿದೆ ಎಂದು ರಕ್ಷಣಾ ಇಲಾಖಾ ಮೂಲಗಳು ತಿಳಿಸಿವೆ.
ಭುವನೇಶ್ವರದಿಂದ 230 ಕಿ.ಮೀ ದೂರದಲ್ಲಿರುವ ಬಾಲ್ಸೂರು ಜಿಲ್ಲೆಯ ಚಂಡೀಪುರದ ಸಮಗ್ರ ಪರೀಕ್ಷಾ ವಲಯ(ಐಟಿಆರ್)ದಿಂದ ಈ ಪರೀಕ್ಷಾ ಉಡಾವಣೆ ನಡೆಸಲಾಗಿದೆ.
ಅರ್ಧ ಮೀಟರ್ ವ್ಯಾಪ್ತಿಯ ಕವಚದೊಳಗೆ ಕ್ಷಿಪಣಿಯನ್ನು ಎರಡು ಹಂತದಲ್ಲಿ ಅಳವಡಿಸಲಾಗಿತ್ತು. ಇದು 700 ಕಿಮೀ ದೂರಕ್ಕೆ ಸಾಗಬಹುದಾಗಿದ್ದು, ಸುಮಾರು ಒಂದು ಟನ್‌ಗಳಷ್ಟು ಭಾರವನ್ನು ಹೇರುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಸ್ತುತ ಕ್ಷಿಪಣಿಯನ್ನು ಈ ಹಿಂದೆ ಜಲಾಂತರ್ಗಾಮಿ ನೆಲೆಯಿಂದ ಪರೀಕ್ಷಿಸಲಾಗಿತ್ತು. ಕ್ಷಿಪಣಿಯ ವೇಗ, ಕ್ಷಿಪಣಿ ಪಥ ಹಾಗೂ ಅದರ ಇತರ ಕಾರ್ಯಕ್ಷಮತೆಯ ಪರೀಕ್ಷೆಗಾಗಿ ಬುಧವಾರದ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆ-15 ಕ್ಷಿಪಣಿಯ ಉದ್ದ ಸುಮಾರು 11 ಮೀಟರ್‌ಗಳು. ಇದು 8.5 ಮೀಟರ್ ಉದ್ದದ ಪೃಥ್ವಿಗಿಂತ ದೊಡ್ಡದಾಗಿದ್ದು, 15 ಮೀಟರ್ ಉದ್ದದ ಅಗ್ನಿ-1ಕ್ಕಿಂತ ಚಿಕ್ಕದಾಗಿದೆ.
ಈ ಕ್ಷಿಪಣಿಯ ಪರೀಕ್ಷಾ ಉಡಾವಣೆ ವೇಳೆಗೆ, ಉಡಾವಣಾ ಸ್ಥಳದ ಎರಡು ಕಿ.ಮೀ ಸುತ್ತಮುತ್ತಲಿನ ಐದು ಹಳ್ಳಿಗಳ ಸುಮಾರು 3,010 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಎ.ಸಿ.ಪಧಿಯಾರಿ ತಿಳಿಸಿದ್ದಾರೆ. |