ಸಿಂಗೂರು ತಪಾಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದರ್‌ನಾಗೋರ್ ಉಪ-ವಿಭಾಗೀಯ ನ್ಯಾಯಾಲಯ ಬುಧವಾರ ಸಿಪಿಎಂನ ಸಿಂಗೂರ್ ವಲಯ ಸಮಿತಿ ಕಾರ್ಯದರ್ಶಿ ಸುಹ್ರಿದ್ ದತ್ತಾ ಹಾಗೂ ಪಕ್ಷದ ಬೆಂಬಲಿಗ ದೇಬು ಮಲಿಕ್ ಅವರುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇದರಿಂದಾಗಿ ಪಶ್ಚಿಮ ಬಂಗಾಳಾದ ಆಡಳಿತಾರೂಢ ಸಿಪಿಎಂ ಭಾರೀ ಮುಜುಗರಕ್ಕೀಡಾಗಿದೆ.
ಸುಹ್ರಿದ್ ದತ್ತಾ ಹಾಗೂ ದೇಬು ಮಲಿಕ್ ಅವರುಗಳು 19ರ ಹರೆಯದ ತಪಾಸಿ ಮಲಿಕ್ ಕೊಲೆ ಪ್ರಕರಣದ ದೋಷಿಗಳು ಎಂದು ನ್ಯಾಯಾಲಯ ಮಂಗಳವಾರ ಘೋಷಿಸಿತ್ತು. ಮೃತ ತಪಾಸಿಯ ಸುಟ್ಟು ಕರಕಲಾದ ದೇಹದ ಪಳಿಯುಳಿಕೆಗಳು ಸಿಂಗೂರಿನ ಟಾಟಾ ಮೋಟಾರ್ಸ್‌ನ ಸಣ್ಣಕಾರು ಫ್ಯಾಕ್ಟರಿಯ ಆವರಣದಲ್ಲಿ ಪತ್ತೆಯಾಗಿತ್ತು.
ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಅಮರ್ ಕಾಂತಿ ಆಚಾರ್ಯ ಅವರು ಬುಧವಾರ ಶಿಕ್ಷೆಯನ್ನು ಘೋಷಿಸಿದ್ದಾರೆ.
ದೋಷಾರೋಪ ಪಟ್ಟಿಯಲ್ಲಿ ಸಹ್ರಿದ್ ದತ್ತಾ ವಿರುದ್ಧ ಮಾಡಲಾಗಿರುವ ಎಲ್ಲಾ ಮೂರು ಆರೋಪಗಳನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ತಮಗೆ ಸಂತೋಷವಾಗಿದೆ ಎಂದು ಸಿಬಿಐ ವಕೀಲರಾಗಿರುವ ಪಾರ್ಥ ತಪಾಸಿ ಹೇಳಿದ್ದಾರೆ.
ಶಿಕ್ಷೆ ಘೋಷಣೆಯಾಗುತ್ತಿರುವಂತೆ, ಅಲ್ಲಿ ಹಾಜರಿದ್ದ ದತ್ತಾ ಸಹೋದರ ಸರೋಜ್ ಕಣ್ಣಲ್ಲಿ ನೀರು ತುಂಬಿಕೊಂಡು, "ಇದು ತನ್ನ ಸಹೋದರನ ವಿರುದ್ಧ ಮಾಡಲಾಗಿರುವ ಫಿತೂರಿ" ಎಂದು ಪ್ರತಿಕ್ರಿಯಿಸಿದ್ದಾರೆ.
ತೀರ್ಪಿಗೆ ಪ್ರತಿಕ್ರಿಯಿಸಿರುವ ತಪಾಸಿ ಹೆತ್ತವರು ತನ್ನ ಪುತ್ರಿಯ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಈ ತೀರ್ಪು, ಡಿಸೆಂಬರ್ 15ರಂದು ಸಿಂಗೂರಿಗೆ ಭೇಟಿ ನೀಡಲಿರುವ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಬತ್ತಳಿಕೆಗೆ ಹೊಸಬಾಣವೊಂದನ್ನು ಸೇರಿಸಿದೆ. "ಕೊನೆಗೂ ಸತ್ಯ ಹೊರಬಿದ್ದಿದೆ. ತಾನು ಸಿಂಗೂರಿಗೆ ತೆರಳಲಿದ್ದು, 400 ಎಕರೆ ಜಾಗವನ್ನು ರೈತರಿಗೆ ಮರಳಿಸುವಂತೆ ಒತ್ತಾಯಿಸಲಿದ್ದೇನೆ. ಹಾಗಾದಾಗ ತಪಾಸಿಯ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದು ಮಮತಾ ನ್ಯಾಯಾಲಯದ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. |