ಎಲ್ಲ ಕುತೂಹಲ, ನಿರೀಕ್ಷೆ, ಊಹಾಪೋಹ ಮತ್ತು ಪ್ರಶ್ನೆಗಳಿಗೆ ಉತ್ತರವೆಂಬಂತೆ, ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್), ಧಾರ್ಮಿಕ ನಾಯಕ, ಮಠಾಧೀಶ ದಯಾನಂದ್ ಪಾಂಡೆ ಎಂಬವರನ್ನು ಬಂಧಿಸಿದೆ.
ಕಾನ್ಪುರದ ಕಾಕದೇವ್ ಪ್ರದೇಶದಿಂದ ದಯಾನಂದ್ ಪಾಂಡೆಯನ್ನು ಬಂಧಿಸಲಾಗಿದೆ. ಬಂಧಿತ ಪಾಂಡೆ ಜಮ್ಮುವಿನ ಮಠವೊಂದರ ಸ್ವಾಮೀಜಿ ಎಂಬುದಾಗಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ ಬ್ರಿಜ್‌ಲಾಲ್ ಹೇಳಿದ್ದಾರೆ.
ಏತನ್ಮಧ್ಯೆ, ಪಾಂಡೆಗೂ ಬಜರಂಗ ದಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ಪ್ರಕಾಶ್ ಶರ್ಮಾ ಹೇಳಿದ್ದಾರೆ. "ಈ ವ್ಯಕ್ತಿಯ ಕುರಿತು ತನಗೆ ಗೊತ್ತೇ ಇಲ್ಲ. ಅವರ್ಯಾರೆಂಬುದೂ ತನಗೆ ತಿಳಿದಿಲ್ಲ, ಹಾಗೂ ಇವರು ಬಜರಂಗ ದಳದ ಸದಸ್ಯರಲ್ಲ" ಎಂದು ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ವಿವಿಐಪಿಯೊಬ್ಬರನ್ನು ಬಂಧಿಸಬೇಕಾಗಿದೆ ಎಂದು ಎಟಿಎಸ್ ನಾಸಿಕ್ ನ್ಯಾಯಾಲಯದ ಅನುಮತಿ ಪಡೆದಿತ್ತು. ಇಬ್ಬರು ಸದಸ್ಯದ ಎಟಿಎಸ್ ತಂಡವು ಮಂಗಳವಾರ ರಾತ್ರಿ ಉತ್ತರ ಪ್ರದೇಶ ತಲುಪಿತ್ತು. |