ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪರಸ್ಪರರ ಸಾವಿಗೆ ಕಾದಿದ್ದ ಮೊರಾರ್ಜಿ, ಚರಣ್ ಸಿಂಗ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಸ್ಪರರ ಸಾವಿಗೆ ಕಾದಿದ್ದ ಮೊರಾರ್ಜಿ, ಚರಣ್ ಸಿಂಗ್!
ಮಾಜಿ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಮತ್ತು ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳಾದ ಚರಣ್ ಸಿಂಗ್ ಮತ್ತು ಜಗಜೀವನ್ ರಾಮ್ ಅವರು ಪರಸ್ಪರರ ಸಾವಿಗೆ ಕಾಯುತ್ತಿದ್ದರು!

ಜನತಾ ಪಕ್ಷದ ಆಳ್ವಿಕೆಯ ಅವಧಿಯಲ್ಲಿ ಕಾನೂನು ಸಚಿವರೂ ಆಗಿದ್ದ ಹಿರಿಯ ವಕೀಲ ಶಾಂತಿ ಭೂಷಣ್ ಅವರು ತಮ್ಮ ಪುಸ್ತಕದಲ್ಲಿ ಆ ದಿನಗಳನ್ನು ನೆನಪಿಸಿದ್ದಾರೆ. ನಾಯಕರ ಅಧಿಕಾರಕ್ಕಾಗಿನ ಮಹತ್ವಾಕಾಂಕ್ಷೆಯು ದೇಶದ ಮೊದಲ ಕಾಂಗ್ರೆಸ್ಸೇತರ ಸರಕಾರವನ್ನು ಪತನಗೊಳಿಸಿತು ಎಂಬುದನ್ನು ಅವರು 'ಕೋರ್ಟಿಂಗ್ ಡೆಸ್ಟಿನಿ' ಎಂಬ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

1979ರ ಜುಲೈ ತಿಂಗಳಲ್ಲಿ ದಿಢೀರ್ ಪತನವಾದ ಸರಕಾರ ಹೆಚ್ಚು ದಿನ ಬಾಳುವುದಿಲ್ಲ ಎಂದು 1978ರಲ್ಲೇ ತೀರ್ಮಾನಕ್ಕೆ ಬರುವಲ್ಲಿ ಶಾಂತಿಭೂಷಣ್ ಎರಡು ಘಟನೆಗಳನ್ನು ಉದಾಹರಿಸಿದ್ದಾರೆ. ಆ ದಿನಗಳಲ್ಲಿ ಚರಣ್ ಸಿಂಗ್ ಅವರು ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದು, ದಂಗೆ ಏಳಲಿದ್ದಾರೆಂಬ ಕುರಿತು ಭಾರೀ ಊಹಾಪೋಹಗಳಿದ್ದವು. ಅಂದು ಚುನಾವಣಾ ಸುಧಾರಣೆಗಳ ಕುರಿತ ಸಂಪುಟ ಸಮಿತಿಯ ಸಭೆಗೆ ಚರಣ್ ತಡವಾಗಿ ಬಂದಿದ್ದರು.

ಭೂಷಣ್ ಕೂಡ ಈ ಸಮಿತಿಯ ಸದಸ್ಯರಾಗಿದ್ದು, ಅದರಲ್ಲಿ ಎಲ್.ಕೆ.ಆಡ್ವಾಣಿ ಮತ್ತು ಪಿ.ಸಿ.ಚಂದರ್ ಅವರೂ ಇದ್ದರು. ತಡವಾಗಿ ಬಂದಿದ್ದಕ್ಕೆ ಕಾರಣ ನೀಡಿದ ಸಿಂಗ್, ತಾನು ಕಾರನ್ನೇರುವಾಗ ಪತ್ರಕರ್ತರೊಬ್ಬರು ತನ್ನನ್ನು ತಡೆದು ನಿಲ್ಲಿಸಿ, ಪ್ರಧಾನಿಯಾಗಲು ತೀವ್ರ ಉತ್ಸುಕರಾಗಿದ್ದೀರಾ ಎಂದು ಪ್ರಶ್ನಿಸಿದರೆಂದು ನುಡಿದರು. ಕೋಪಗೊಂಡ ಚರಣ್ ಸಿಂಗ್, ಪ್ರಧಾನಿಯಾಗುವ ಆಕಾಂಕ್ಷೆಯಲ್ಲಿ ತಪ್ಪೇನೂ ಇಲ್ಲ ಎಂದು ನುಡಿದರಲ್ಲದೆ, ಆದರೆ ಮೊರಾರ್ಜಿಯನ್ನು ಕಿತ್ತು ಹಾಕಿ ಆ ಸ್ಥಾನಕ್ಕೇರುವ ಸಂಚು ಹೂಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಒಂದಲ್ಲ ಒಂದು ದಿನ ಮೊರಾರ್ಜಿ ಸಾಯುತ್ತಾರೆ ಮತ್ತು ಅವರ ಉತ್ತರಾಧಿಕಾರಿಯಾಗುವ ಆಕಾಂಕ್ಷೆ ಇರಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಸಿಂಗ್ ಹೇಳಿದ್ದರು.

'ಮೊರಾರ್ಜಿ ಸಾವಿನ ಬಗ್ಗೆ ಚೌಧುರಿ ಚರಣ್ ಸಿಂಗ್ ಇಷ್ಟೊಂದು ಮುಕ್ತವಾಗಿ ಹೇಳಿದ್ದನ್ನು ಕೇಳಿ ನಮಗೆ ಆಘಾತವಾಗಿತ್ತು' ಎಂದು ಶಾಂತಿ ಭೂಷಣ್ ಹೇಳಿದ್ದಾರೆ. ಅದೇ ಮಧ್ಯಾಹ್ನ ಮೊರಾರ್ಜಿಯನ್ನು ಭೇಟಿ ಮಾಡಿ, ನಿಮ್ಮನ್ನು ಪದಚ್ಯುತಿಗೊಳಿಸಲು ಸಿಂಗ್ ಯಾವುದೇ ಪ್ರಯತ್ನ ಮಾಡುತ್ತಿಲ್ಲವೆಂದು ಅವರಿಗೆ ಮನದಟ್ಟು ಮಾಡಿದರು.

ಪ್ರಧಾನಿ ಹುದ್ದೆ ಖಾಲಿ ಬಿದ್ದರೆ ಆ ಸ್ಥಾನಕ್ಕೇರುವ ಆಕಾಂಕ್ಷೆ ಚರಣ್ ಸಿಂಗ್ ಅವರಿಗಿದೆ ಎಂಬ ವಿಷಯವನ್ನು ತಾನು ಮೊರಾರ್ಜಿಗೆ ತಿಳಿಹೇಳುವ ಭಾಷೆಯಲ್ಲಿ ಹೇಳಿದ್ದೆ. ಬಹುಶಃ ಸಿಂಗ್ ಇದನ್ನು ಯಾವ ರೀತಿ ಹೇಳಿರಬಹುದು ಎಂಬುದನ್ನು ಮೊರಾರ್ಜಿ ಊಹಿಸಿದರು. ಚರಣ್ ಸಿಂಗ್ ತನ್ನ ಉತ್ತರಾಧಿಕಾರಿಯಾಗುವುದು ಸಾಧ್ಯವಿಲ್ಲ. ಯಾಕೆಂದರೆ, ತಾನು ಅವರಿಗಿಂತ ವಯಸ್ಸಿನಲ್ಲಿ ಹಿರಿಯರಾದರೂ, ಅವರಿಗಿಂತ ಉತ್ತಮ ಆರೋಗ್ಯ ಹೊಂದಿರುವುದಾಗಿ ಮತ್ತು ಅವರಿಗಿಂತ ಹೆಚ್ಚು ಕಾಲ ಬದುಕಬಲ್ಲೆ ಎಂದು ಮೊರಾರ್ಜಿ ಹೇಳಿದ್ದರೆಂದು ನೆನಪಿಸಿಕೊಂಡಿದ್ದಾರೆ ಶಾಂತಿ ಭೂಷಣ್.

ಸಿಂಗ್ ಅಂದು 76ರ ಆಸುಪಾಸಿನಲ್ಲಿದ್ದರು ಮತ್ತು 75-76ರ ಪ್ರಾಯದಲ್ಲಿ ಅದೆಷ್ಟೋ ಪ್ರಮುಖ ರಾಜಕೀಯ ನಾಯಕರು ಮೃತಪಟ್ಟಿದ್ದಾರೆ ಎಂದು ದೊಡ್ಡ ಪಟ್ಟಿಯನ್ನೇ ನೀಡಿದ್ದರು ಮೊರಾರ್ಜಿ. "ಆ ಬಳಿಕ ಮೊರಾರ್ಜಿ ತಮ್ಮ ಧ್ವನಿ ತಗ್ಗಿಸಿದರು ಮತ್ತು ತನ್ನ ಇಬ್ಬರು ಸಂಪುಟ ಸಹೋದ್ಯೋಗಿಗಳು ಒಂದೇ ವರ್ಷದಲ್ಲಿ ಸಾವನ್ನಪ್ಪುತ್ತಾರೆ ಎಂದು ತಮ್ಮ ಜ್ಯೋತಿಷಿ ಹೇಳಿರುವುದಾಗಿ ನನ್ನ ಕಿವಿಯಲ್ಲಿ ಉಸುರಿದರು" ಎಂದಿದ್ದಾರೆ ಶಾಂತಿ ಭೂಷಣ್.

ಆ ಇಬ್ಬರಲ್ಲಿ ನಾನೂ ಒಬ್ಬ ಅಲ್ಲವಲ್ಲ ಎಂದು ಕುತೂಹಲದಿಂದಲೇ ಕೇಳಿದರು ಭೂಷಣ್. ಅಲ್ಲ ಎಂದರು ಮೊರಾರ್ಜಿ. ಆ ಇಬ್ಬರು ಬಹುಶಃ ಚರಣ್ ಸಿಂಗ್ ಮತ್ತು ಜಗಜೀವನ್ ರಾಮ್ ಇರಬಹುದು ಎಂದು ತರ್ಕಿಸಿದರು ಭೂಷಣ್.

ಇದನ್ನು ಕೇಳಿದ ಬಳಿಕ, ಈ ಸರಕಾರ ದೀರ್ಘಕಾಲ ಬಾಳುವುದಿಲ್ಲ ಎಂಬುದು ನನಗೆ ಮನದಟ್ಟಾಯಿತು. ಪ್ರಧಾನಿಯೊಬ್ಬರು ತಮ್ಮ ಇಬ್ಬರು ಹಿರಿಯ ಸಂಪುಟ ಸಹೋದ್ಯೋಗಿಗಳ ಸಾವಿಗೆ ಕಾಯುತ್ತಿದ್ದರೆ, ಅವರಲ್ಲೊಬ್ಬರು ಸ್ವತಃ ಪ್ರಧಾನಿಯ ಸಾವಿಗೇ ಕಾಯುತ್ತಿರುವಾಗ, ಈ ಸರಕಾರ ಉಳಿಯುವುದು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದೆನೆಂದರು ಭೂಷಣ್.

ವಿಶೇಷವೆಂದರೆ ಮೊರಾರ್ಜಿ ಅವರು 1995ರವರೆಗೂ ಬದುಕಿದರು. ಜಗಜೀವನ್ ರಾಮ್ ಮತ್ತು ಚರಣ್ ಸಿಂಗ್ ಅನುಕ್ರಮವಾಗಿ ನಿಧನರಾದದ್ದು 1986 ಮಕ್ಕು 1987ರಲ್ಲಿ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾನ್ಪುರದ ಮಠಾಧೀಶ ದಯಾನಂದ ಪಾಂಡೆ ಬಂಧನ
ಗುಜರಾತ್ ಮಸೂದೆಗೆ ಸಹಿ ಹಾಕದಿರಲು ರಾಷ್ಟ್ರಪತಿಗೆ ಸಲಹೆ?
ಸಿಂಗೂರು ಕೊಲೆ: ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ
ಚಂಡೀಪುರದಲ್ಲಿ ಯಶಸ್ವೀ ಕ್ಷಿಪಣಿ ಪರೀಕ್ಷೆ
ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ
ಮ್ಯಾಗಿ ರಾಜೀನಾಮೆ ಸ್ವೀಕರಿಸಿದ ಕಾಂಗ್ರೆಸ್