ಇಲ್ಲಿನ ಡಾ| ಅಂಬೇಡ್ಕರ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಎರಡು ಸಶಸ್ತ್ರ ಗುಂಪುಗಳೊಳಗೆ ಬುಧವಾರ ಸಂಜೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಯೊಬ್ಬನ ಮೇಲೆ ಮಾರಾಣಾಂತಿಕ ದಾಳಿ ನಡೆಸಲಾಗಿದೆ.ಚಾಕು, ರಾಡು, ದೊಣ್ಣೆ ಮುಂತಾದ ಮಾರಕಾಯುಧಗಳಿಂದ ವಿದ್ಯಾರ್ಥಿಗಳು ಬಡಿದಾಡುತ್ತಿದ್ದು, ಪತ್ರಿಕಾ ಛಾಯಾಗ್ರಾಹಕರು ಫೋಟೋ ತೆಗೆಯುತ್ತಿದ್ದರು. ಆದರೆ ಪೊಲೀಸರು ಮೌನಪ್ರೇಕ್ಷಕರಂತೆ ಕದನ ನಡೆಯುತ್ತಿದ್ದ ಕೆಲವೇ ಹೆಜ್ಜೆಗಳ ದೂರದಲ್ಲಿ ನಿಂತು ಈ ಘಟನೆಯನ್ನು ನೋಡುತ್ತಿದ್ದರು!ಗೂಂಡಾಗಿರಿಯಲ್ಲಿ ತೊಡಗಿದ್ದ ಹುಡುಗರ ಮೇಲೆ ಯಾಕೆ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಯೊಬ್ಬರು, "ಕಾಲೇಜು ಆವರಣದೊಳಕ್ಕೆ ತೆರಳಲು ಪ್ರಿನ್ಸಿಪಾಲರ ಅನುಮತಿ ದೊರೆತಿರಲಿಲ್ಲ" ಎಂದು ಹೇಳಿದ್ದಾರೆ.ರಾಷ್ಟ್ರೀಯ ನಾಯಕರೊಬ್ಬರ ಜನ್ಮದಿನಾಚರಣೆಯ ಸಲುವಾಗಿ ಮುದ್ರಿಸಲಾಗಿರುವ ಭಿತ್ತಿಚಿತ್ರ ಈ ರಾದ್ಧಾಂತಕ್ಕೆ ಕಾರಣವೆನ್ನಲಾಗಿದೆ. ಭಿತ್ತಿಚಿತ್ರದಲ್ಲಿ ಇನ್ನೊಬ್ಬ ನಾಯಕನ ಹೆಸರು ಪ್ರಕಟಿಸದಿರುವುದು ಒಂದು ಗುಂಪಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣ ಎಂದು ಒಂದು ಮೂಲ ತಿಳಿಸಿದರೆ, ಇದು ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ಮನೆಯಿಂದ ಬರುವ ವಿದ್ಯಾರ್ಥಿಗಳ ನಡುವಿನ ಘರ್ಷಣೆ ಎಂದು ಇನ್ನೊಂದು ಮೂಲ ಹೇಳಿದೆ.ಪರೀಕ್ಷೆಯ ದಿನವಾದ ಬುಧವಾರದಂದು ಸಾಯಂಕಾಲ ಪರಸ್ಪರ ಘರ್ಷಣೆಗೆ ಇಳಿದ ಎರಡೂ ಗುಂಪುಗಳ ವಿದ್ಯಾರ್ಥಿಗಳು ಮಾರಕಾಯುಧಗಳನ್ನು ಹೊಂದಿದ್ದರು. ಸೂಕ್ತ ಸಮಯಕ್ಕೇ ಕಾಲೇಜಿಗೆ ಪೊಲೀಸರು ತಲುಪಿದರಾದರೂ, ಅವರು ಮೌನ ಪ್ರೇಕ್ಷಕರಾಗಬೇಕಾಯಿತು.ವಿದ್ಯಾರ್ಥಿಯೊಬ್ಬ ಲಾಂಗನ್ನು ಝಳಪಿಸುತ್ತಾ ಕ್ಯಾಂಪಸ್ಸಿನೊಳಕ್ಕೆ ಬಂದಿರುವುದು ಇಡಿಯ ಘಟನೆಗೆ ನಾಂದಿ ಹಾಡಿದೆ. ಈತನನ್ನು ಮುತ್ತಿದ ಸುಮಾರು 15 ವಿದ್ಯಾರ್ಥಿಗಳ ಗುಂಪು ಹಿಗ್ಗಾಮುಗ್ಗಾ ಥಳಿಸುತ್ತಿದ್ದು, ಆತ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ, ಘಟನೆಯ ಕ್ಷಣಕ್ಷಣಗಳ ಫೊಟೋ ತೆಗೆಯುತ್ತಿದ್ದ ಛಾಯಾಗ್ರಾಹಕರು ವಿದ್ಯಾರ್ಥಿಯನ್ನು ರಕ್ಷಿಸುವಂತೆ ವಿನಂತಿಸಿದರೂ ಪೊಲೀಸರು ಕಿವುಡರಂತೆ ನಿಂತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಸುಮಾರು 90 ನಿಮಿಷ ನಡೆದ ಈ ಹಿಂಸಾಚಾರದಲ್ಲಿ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.ಬಳಿಕ ಕಾಲೇಜು ಪ್ರಿನ್ಸಿಪಾಲರೊಂದಿಗೆ ಕೆಲವೇಕ್ಷಣಗಳ ಮುಚ್ಚಿದಬಾಗಿಲಿನ ಮಾತುಕತೆ ನಡೆಸಿದ ಪೊಲೀಸರು ಪ್ರಭಾಕರ, ಜಯಕುಮಾರ್ ಹಾಗೂ ಬಾಲಸುಬ್ರಮಣ್ಯ ಎಂಬ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. |