ಮಾಲೆಗಾಂವ್ ಸಿಮಿ ಕಚೇರಿ ಸಮೀಪ ಬಾಂಬ್ ಇರಿಸಲು ಕೆಲವು ಮುಸ್ಲಿಮರನ್ನು ಗೊತ್ತುಮಾಡಿರುವುದಾಗಿ ಬಂಧನದಲ್ಲಿರುವ ಸೇವಾನಿರತ ಸೇನಾಧಿಕಾರಿ ಶ್ರೀಕಾಂತ್ ಪುರೋಹಿತ್ ನಾರ್ಕೋ ಅನಾಲಿಸಿಸ್ ಪರೀಕ್ಷೆ ವೇಳೆಗೆ ಹೇಳಿರುವುದು ತನಿಖಾ ತಂಡವನ್ನು ಸಂಪೂರ್ಣ ದಿಗ್ಭ್ರಮೆಗೊಳಪಡಿಸಿದೆ.
ಸೆಪ್ಟೆಂಬರ್ 29ರಂದು ಜವಳಿ ನಗರ ಮಾಲೆಗಾಂವ್‌ನಲ್ಲಿ ನಡೆಸಲಾಗಿರುವ ಸ್ಫೋಟಕ್ಕೆ ಮೂಲಭೂತವಾದಿ ಹಿಂದೂಗಳು ಸಹಾಯ ನೀಡಿದರು ಎಂಬುದಾಗಿಯೂ ಪುರೋಹಿತ್ ಹೇಳಿರುವುದಾಗಿ ತನಿಖಾ ತಂಡದ ನಿಕಟ ಮೂಲಗಳು ತಿಳಿಸಿವೆ.
ಬುಧವಾರ ಪುರೋಹಿತ್‌ರನ್ನು ಬೆಂಗಳೂರಿನಲ್ಲಿ ಎರಡನೆ ಬಾರಿಗೆ ನಾರ್ಕೋ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫರಿದಾಬಾದ್ ಮೂಲದ ಅಭಿನವ್ ಭಾರತ್ ಸಂಘಟನೆಯ ಗುರವೊಬ್ಬರ ಪ್ರೇರಣೆಯ ಮೇರೆಗೆ ಮಾಲೆಗಾಂವ್ ಕಾರ್ಯಾಚರಣೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ್ ಸರಸ್ವತಿ ಅವರ ಕೊಲೆ ಸೇರಿದಂತೆ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವಂತೆ ತನ್ನ ಗುರು ಹೇಳಿದ್ದು, ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಪುರೋಹಿತ್ ಹೇಳಿದ್ದಾರೆನ್ನಲಾಗಿದೆ.
ಇವರ ಗುರು ಯಾರೆಂದು ತನಿಖಾತಂಡಕ್ಕೆ ಇದುವರೆಗೆ ಪತ್ತೆ ಹಚ್ಚಲಾಗಿಲ್ಲ. ಪುರೋಹಿತ್ ಹೇಳಿಕೆ ಪ್ರಕಾರ ಹಿಂದೂ ಸಂಚುಕೋರರಿಗೆ, ತಮ್ಮ ಮುಸ್ಲಿಂ ಸಹವರ್ತಿಗಳು ಏನು ಮಾಡುತ್ತಿದ್ದಾರೆ ಎಂಬುದೂ ತಿಳಿದಿರಲಿಲ್ಲ. |