ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನಕ್ಕೀಡಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರ ಗುರು, ತಾನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
ಜೂನ ಅಕಾರದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಅವರು, ತಾನು ಸಾಧ್ವಿಗೆ ಕೆಲವು ವರ್ಷಗಳ ಹಿಂದೆ ಕುಂಭಮೇಳದಲ್ಲಿ ದೀಕ್ಷೆ ನೀಡಿರುವುದಾಗಿ ವರದಿಗಾರರಿಗೆ ತಿಳಿಸಿದ್ದಾರೆ.
ಕುಂಭಮೇಳದ ಸಂದರ್ಭದಲ್ಲಿ ಪ್ರತೀವರ್ಷ ಸಾವಿರಾರು ಪುರುಷರು ಮತ್ತು ಮಹಿಳೆಯರು ಸಾಧುಗಳು ಮತ್ತು ಸಾಧ್ವಿಗಳಾಗಿ ದೀಕ್ಷೆ ಪಡೆಯುತ್ತಿದ್ದು, ಸಹಜ ಪ್ರಕ್ರಿಯೆಯಲ್ಲಿ ಸಾಧ್ವಿಗೂ ದೀಕ್ಷೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೀಕ್ಷೆಯ ವೇಳೆಗೆ ಸಾಧ್ವಿ ತನ್ನ ಕುಟುಂಬಿಕರೊಂದಿಗೆ ಅಲಹಾಬಾದಿಗೆ ಬಂದಿದ್ದರು ಎಂದು ತಿಳಿಸಿದ ಅವರು, ದೀಕ್ಷೆಯ ಬಳಿಕ ತಾನು ಒಂದು ಅಥವಾ ಎರಡು ಬಾರಿ ಮಧ್ಯಪ್ರದೇಶದಲ್ಲಿ ಕೆಲವೇ ನಿಮಿಷಗಳ ಕಾಲ ಸಾಧ್ವಿಯನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ.
ತನ್ನ ಶಿಷ್ಯೆಯ ಮೇಲಿನ ಆರೋಪಗಳು ಸಾಬೀತಾಗುವ ಮುನ್ನವೇ ಅವರನ್ನು ಭಯೋತ್ಪಾದಕಿ ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ. ತನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬುಗೆ ಇದೆ ಎಂದು ನುಡಿದು ಅವರು ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬರು ಸ್ವೀಕರಿಸಬೇಕು ಎಂದು ನುಡಿದರು.
ಅವದೇಶಾನಂದ ಗಿರಿ ಅವರನ್ನು ಪ್ರಶ್ನಿಸಲು ಎಟಿಎಸ್ ತಂಡವು ಆಗಮಿಸಲಿದೆ ಎಂಬ ವದಂತಿ ಹರಡಿದ್ದು, ಬುಧವಾರ ಅಂಬಾಲ ಆಶ್ರಮದ ಹೊರಗಡೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹಲವಾರು ಪ್ರತಿನಿಧಿಗಳು ಬಹುದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ ಸಾಯಂಕಾಲವಾದರೂ ಅಲ್ಲಿಗೆ ಯೂರೂ ತಲುಪಿರಲಿಲ್ಲ. |