ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಬಂಧಿಸಲಾಗಿರುವ ಮಠಾಧೀಶ ದಯಾನಂದ ಪಾಂಡೆ ಅಲಿಯಾಸ್ ಸುಧಾಕರ್ ದ್ವಿವೇದಿ ಅಲಿಯಾಸ್ ಅಮೃತಾನಂದ ಸ್ವಾಮಿ ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು ಮೂರುದಿನಗಳ ಕಾಲ ಪ್ರಯಾಣಕ್ಕಾಗಿ(ಟ್ರಾನ್ಸಿಟ್ ರಿಮಾಂಡ್) ಮುಂಬೈ ಎಟಿಎಸ್ ವಶಕ್ಕೆ ನೀಡಿದೆ.ಬಂಧಿತ ಸ್ವಾಮೀಜಿಯನ್ನು ನವೆಂಬರ್ 16ರ ಸಾಯಂಕಾಲ ನಾಲ್ಕುಗಂಟೆಯೊಳಗಾಗಿ ನಾಸಿಕ್ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕು ಎಂದು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ನೀಡಿದ್ದಾರೆ. ಗುರುವಾರ ನ್ಯಾಯಾಲಯಕ್ಕೆ ರಜೆಯಾಗಿರುವ ಹಿನ್ನೆಲೆಯಲ್ಲಿ ಪಾಂಡೆಯನ್ನು ನ್ಯಾಯಾಧೀಶರ ಮನೆಯಲ್ಲಿ ಹಾಜರು ಪಡಿಸಲಾಗಿತ್ತು.ಅವರನ್ನು ಮುಂದಿನ ತನಿಖೆಯಾಗಿ ಮುಂಬೈಗೆ ಕರೆದೊಯ್ಯಲಾಗುತ್ತಿದೆ.ಮುಂಬೈ ಹಾಗೂ ಉತ್ತರಪ್ರದೇಶದ ಎಟಿಎಸ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಮಠಾಧೀಶ ಪಾಂಡೆ ಅವರನ್ನು ಬಂಧಿಸಲಾಗಿತ್ತು.ಶಾರದ ಸರ್ವಜ್ಞ ಪೀಠದ ಸ್ವಯಂ ಘೋಷಿತ ಪೀಠಾಧೀಶರಾಗಿರುವ ದಯಾನಂದ ಪಾಂಡೆಯವರನ್ನು ಕಾನ್ಪುರದ ರಾವತ್‌ಪುರದಲ್ಲಿರುವ ಅವರ ಸಹೋದರನ ನಿವಾಸದಿಂದ ಬುಧವಾರ ಬಂಧಿಸಲಾಗಿತ್ತು. ಪಾಂಡೆ 2003ರಲ್ಲಿ ಜಮ್ಮುವಿಗೆ ತೆರಳಿದ್ದು, ಅಲ್ಲಿನ ತ್ರಿಕೂಟ ನಗರದಲ್ಲಿರುವ ಮಠ ಒಂದರಲ್ಲಿ ನೆಲೆಯೂರಿದ್ದರು.ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯನ್ನು ತನಿಖೆಗೊಳಪಡಿಸಲು ಎಟಿಎಸ್ ಮುಂದಾಗಿದೆ. ಬಂಧಿತ ಸೇವಾನಿರತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ದಯಾನಂದ ಪಾಂಡೆಯನ್ನು ಬಂಧಿಸಲಾಗಿದೆ.ಎಟಿಎಸ್ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ನಾಸಿಕ್ ನ್ಯಾಯಾಲಯದ ಅನುಮತಿಯೊಂದಿಗೆ ಉತ್ತರ ಪ್ರದೇಶದತ್ತ ಪ್ರಯಾಣ ಬೆಳೆಸಿದ್ದರು. ನಾಸಿಕ್ ಸಿಜೆಎಂ ಅವರು ಸ್ವಾಮಿಜಿಯನ್ನು ಬಂಧಿಸಿ ಮುಂಬೈ ಎಟಿಎಸ್‌ಗೆ ಹಸ್ತಾಂತರಿಸುವಂತೆ, ಉತ್ತರ ಪ್ರದೇಶ ಎಟಿಎಸ್‌ಗೆ ಸಲಹೆ ನೀಡಿದ್ದರು. |