ಇಲ್ಲಿನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಬುಧವಾರ ನಡೆದ ಗುಂಪು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಏಳುಮಂದಿಯನ್ನು ಬಂಧಿಸಿದ್ದಾರೆ. ಬುಧವಾರ ಸಾಯಂಕಾಲ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳು ಮಾರಾಕಾಯುಧಗಳಿಂದ ಬಡಿದಾಡಿಕೊಂಡಿದ್ದರು. ಈ ಘಟನೆಯನ್ನು ಪೊಲೀಸರು ಮೌನಪ್ರೇಕ್ಷಕರಂತೆ ವೀಕ್ಷಿಸಿರುವುದು ಸಾರ್ವತ್ರಿಕ ಟೀಕೆಗೀಡಾಗಿದ್ದು, ಪೊಲೀಸ್ ಉಪ ಆಯುಕ್ತ ನಾರಾಯಣ ಮೂರ್ತಿ ಹಾಗೂ ಇನ್ಸ್‌ಪೆಕ್ಟರ್ ಶೇಖರ್ ಬಾಬು ಅವರನ್ನು ಅಮಾನತ್ತುಗೊಳಿಸಲಾಗಿದೆ. ನಾಲ್ಕು ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಚೆನ್ನೈಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಚೆನ್ನೈ ಪೊಲೀಸ್ ಆಯುಕ್ತ ಆರ್. ಶೇಖರ್ ತಿಳಿಸಿದ್ದಾರೆ.ಏತನ್ಮಧ್ಯೆ, ಕಾಲೇಜಿನ ಪ್ರಿನ್ಸಿಪಾಲರನ್ನು ಅಮಾನತ್ತುಗೊಳಿಸಲಾಗಿದೆ.ಕಾಲೇಜಿನ ಎರಡು ಗುಂಪುಗಳ ನಡುವಿನ ಜಾತಿಗಲಭೆಯೇ ಘರ್ಷಣೆಗೆ ಕಾರಣ ಎಂದು ಅವರು ಹೇಳಿದರು.ಚಾಕು, ರಾಡು, ದೊಣ್ಣೆ ಮುಂತಾದ ಮಾರಕಾಯುಧಗಳಿಂದ ವಿದ್ಯಾರ್ಥಿಗಳು ಬಡಿದಾಡುತ್ತಿದ್ದು, ಪತ್ರಿಕಾ ಛಾಯಾಗ್ರಾಹಕರು ಫೋಟೋ ತೆಗೆಯುತ್ತಿದ್ದರು. ಆದರೆ ಪೊಲೀಸರು ಮೌನಪ್ರೇಕ್ಷಕರಂತೆ ಕದನ ನಡೆಯುತ್ತಿದ್ದ ಕೆಲವೇ ಹೆಜ್ಜೆಗಳ ದೂರದಲ್ಲಿ ನಿಂತು ಈ ಘಟನೆಯನ್ನು ನೋಡುತ್ತಿದ್ದರು.ಗೂಂಡಾಗಿರಿಯಲ್ಲಿ ತೊಡಗಿದ್ದ ಹುಡುಗರ ಮೇಲೆ ಯಾಕೆ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಯೊಬ್ಬರು, "ಕಾಲೇಜು ಆವರಣದೊಳಕ್ಕೆ ತೆರಳಲು ಪ್ರಿನ್ಸಿಪಾಲರ ಅನುಮತಿ ದೊರೆತಿರಲಿಲ್ಲ" ಎಂದು ಹೇಳಿದ್ದಾರೆ. |