ಜಮ್ಮು: ಮುಸ್ಲಿಮರನ್ನು ಒಲೈಸಲು ಯುಪಿಎ ಸರಕಾರವು ರಾಷ್ಟ್ರೀಯವಾದಿ ಸಂಘಟನೆಗಳು ಮತ್ತು ಹಿಂದೂ ಸ್ವಾಮೀಜಿಗಳನ್ನು ತೊಡಕಿನಲ್ಲಿ ಸಿಲುಕಿಸಲು ಸುಳ್ಳು ಪ್ರಕರಣಗಳನ್ನು ಹೂಡುವ ಫಿತೂರಿ ನಡೆಸುತ್ತಿದೆ ಎಂದು ಆರೋಪಿಸಿರುವ ವಿಶ್ವಹಿಂದೂ ಪರಿಷತ್, ಮಾಲೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ನಾಯಕರ ಬಂಧನವನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ಹೂಡುವುದಾಗಿ ಗುರುವಾರ ಘೋಷಿಸಿದೆ.
ಅದಾಗ್ಯೂ, ಬಂಧಿತ ದಯಾನಂದ ಪಾಂಡೆ ಹಾಗೂ ವಿಶ್ವಹಿಂದೂ ಪರಿಷತ್‌ಗೆ ಯಾವುದೇ ಸಂಪರ್ಕವಿಲ್ಲ ಎಂದು ಸಂಘಟನೆ ಹೇಳಿದೆ.
"ವಿಹಿಂಪ ಮತ್ತು ಬಜರಂಗದಳವು ಬಂಧಿತ ಮಠಾಧೀಶರೊಂದಿಗೆ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ. ನಾವವರನ್ನು ಇತರ ಯಾವುದೇ ಸ್ವಾಮಿಜಿಯನ್ನು ಗೌರವಿಸುವಂತೆ ಗೌರವಿಸುತ್ತೇವೆ" ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ರಮಕಾಂತ್ ದುಬೆ ಹೇಳಿದ್ದಾರೆ.
ಸ್ವಾಮಿ ದಯಾನಂದ ಪಾಂಡೆ ಆಗೀಗ ಇಲ್ಲಿಗೆ ಬರುತ್ತಿದ್ದರು. ಅವರು ಯಾವುದೇ ಸಂಶಯಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್, ಬಜರಂಗದಳಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಯುಪಿಎ ಸಂಚುಹೂಡಿದ್ದು, ಇದು ಧಾರ್ಮಿಕ ಗುರುಗಳನ್ನೂ ಬಿಟ್ಟಿಲ್ಲ ಎಂದು ಅವರು ದೂರಿದ್ದಾರೆ.
ಜಮ್ಮು ಕಾಶ್ಮೀರ ಇಲ್ಲವೇ ಅಸ್ಸಾಮಿನ ಪ್ರತ್ಯೇಕತಾವಾದಿಗಳು ಅಥವಾ ಉಗ್ರರ ವಿರುದ್ಧ ಇಂತಹ ಕ್ರಮಗಳನ್ನು ಕೈಗೊಳ್ಳಲು ಕೇಂದ್ರಕ್ಕೆ ಧೈರ್ಯವಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ. |