ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಇಂದು ರಾತ್ರಿ ಗಂಟೆ ಎಂಟೂ ಮುವತ್ತಕ್ಕೆ ಭಾರತದ ತ್ರಿವರ್ಣವು ಚಂದ್ರನ ಮೇಲೆ ರಾರಾಜಿಸಲಿದೆ. ಅಕ್ಟೋಬರ್ 22ರಂದು ಶ್ರೀಹರಿಕೋಟದಿಂದ ಭಾರತೀಯ ವಿಜ್ಞಾನಿಗಳು ರೂಪಿಸಿರುವ ಪ್ರಥಮ ದೇಶೀಯ ಮಾನವ ರಹಿತ ಗಗನನೌಕೆ ಚಂದ್ರಯಾನವನ್ನು ಹಾರಿಬಿಡಲಾಗಿದ್ದು, ಇದು ತ್ರಿವರ್ಣವನ್ನು ಒಳಗೊಂಡಿದೆ. ಭೂಮಿಯಿಂದ 3,86,000 ಕಿ.ಮೀ ಸುತ್ತಿ ಚಂದ್ರನ ಅತ್ಯಂತ ಸಮೀಪ ಅಂದರೆ 100 ಕಿ.ಮೀ ದೂರದಲ್ಲಿ ಸುತ್ತುತ್ತಿರುವ ಚಂದ್ರಯಾನ-1ರಲ್ಲಿರುವ ಮೂನ್ ಇಂಪ್ಯಾಕ್ಟ್ ಪ್ರೋಬ್‌ನಲ್ಲಿ ಭಾರತದ ತ್ರಿವರ್ಣವಿದೆ.ವ್ಯೋಮನೌಕೆಯಲ್ಲಿರುವ ಈ ಮೂನ್ ಇಂಪ್ಯಾಕ್ಟ್ ಪ್ರೋಬ್ ಅನ್ನು ಚಂದ್ರನ ಮೇಲೆ ಇಳಿಸುವುದು ಸಂಪೂರ್ಣ ಯೋಜನೆಯ ಮಹತ್ವದ ಘಟ್ಟವಾಗಿದೆ.ಅಮೆರಿಕ, ಮಾಜಿ ಸೋವಿಯತ್ ಒಕ್ಕೂಟ ಮತ್ತು 17 ರಾಷ್ಟ್ರಗಳನ್ನೊಳಗೊಂಡ ಯುರೋಪ್ ಬಾಹ್ಯಾಕಾಶ ಏಜೆನ್ಸಿಯು ತಮ್ಮ ಧ್ವಜಗಳನ್ನು ಈಗಾಗಲೇ ಚಂದ್ರನ ಮೇಲೆ ನೆಟ್ಟಿವೆ.24 ಕಿಲೋ ತೂಗುವ ಮೂನ್ ಇಂಪ್ಯಾಕ್ಟ್ ಪ್ರೋಬ್‌ನ ಎಲ್ಲ ಬದಿಗಳಿಗೂ ಭಾರತದ ಧ್ವಜದ ತ್ರಿವರ್ಣವನ್ನು ಬಳಿಯಲಾಗಿದೆ.ಕ್ಷಿಪಣಿ ವಿಜ್ಞಾನಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 2004ರ ನವೆಂಬರ್‌ನಲ್ಲಿ ಉದಯ್‌ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಚಂದ್ರಗ್ರಹ ಸಂಶೋಧನಾ ಕಾರ್ಯಕಾರಿ ಸಮೂಹದ ಸಮ್ಮೇಳನದಲ್ಲಿ ನೀಡಿದ ಸಲಹೆಯ ಮೇಲೆ ಪ್ರೋಬ್‌ಅನ್ನು ಚಂದ್ರಯಾನದಲ್ಲಿ ಅಳವಡಿಸಲಾಗಿದೆ.ಮೌಂಟ್ ಎವರೆಸ್ಟ್ ಮತ್ತು ಅಂಚಾರ್ಟಿಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಇದೀಗ ತ್ರಿವರ್ಣವು ಚಂದ್ರಗ್ರಹದಲ್ಲೂ ರಾರಾಜಿಸಲಿದೆ. |