ಛತ್ತೀಸ್‌ಗಢದಲ್ಲಿ ಶುಕ್ರವಾರ ಬೆಳಿಗ್ಗೆ 39ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲಿಯೇ ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯಲ್ಲಿ ಗುಂಡಿನ ದಾಳಿಯೊಂದಿಗೆ ಪರಿಸ್ಥಿತಿ ಉದ್ವಿಗ್ನಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನ ಆರಂಭಗೊಂಡ ಕೆಲವೆ ಗಂಟೆಗಳಲ್ಲಿ ನಕ್ಸಲೀಯರು ಬಸ್ತಾರ್ ಜಿಲ್ಲೆಯಲ್ಲಿನ ಮತಗಟ್ಟೆಗೆ ದಾಳಿ ನಡೆಸಿ, ಐದು ವಿದ್ಯುನ್ಮಾನ ಮತಯಂತ್ರಗಳನ್ನು ಅಪಹರಿಸಿಕೊಂಡು ಹೋಗಿರುವುದಾಗಿ ವರದಿಯೊಂದು ತಿಳಿಸಿದೆ. ಇದರಿಂದಾಗಿ ದಾಂತೇವಾಡ ಪ್ರದೇಶದಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.
ಆದರೆ ಈ ವರದಿಯನ್ನು ಯಾವುದೇ ಅಧಿಕಾರಿಗಳು ಈವರೆಗೂ ಖಚಿತಪಡಿಸಿಲ್ಲ, ಮೊದಲ ಹಂತದ ಚುನಾವಣೆಯ ಅಂಗವಾಗಿ ಛತ್ತೀಸ್‌ಗಢದಲ್ಲಿ ನಕ್ಸಲೀಯರ ಬೆದರಿಕೆಯ ಹಿನ್ನೆಲೆಯ ಅಂಗವಾಗಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇಂದು ಪ್ರಥಮ ಹಂತದ ಚುನಾವಣೆಯಲ್ಲಿ 39 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 383 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಎರಡನೇ ಹಂತದ ಮತದಾನ ನ.20ರಂದು ನಡೆಯಲಿದೆ.
ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ಗೆರಿಲ್ಲಾ ಪಡೆ ಪ್ರಾಬಲ್ಯ ಹೊಂದಿರುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಹಿಂಸಾಚಾರ ತಲೆದೋರಬಹುದು ಎಂದು ಮುನ್ನೆಚ್ಚರಿಕೆ ಅಂಗವಾಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೂ ಇಂದು ಮಾವೋವಾದಿಗಳ ಹಠಾತ್ ದಾಳಿಯಿಂದಾಗಿ ಪರಿಸ್ಥಿತಿ ಉದ್ನಿಗ್ನಗೊಂಡಿದ್ದು, ಮತದಾನ ಪ್ರಕ್ರಿಯೆಯಲ್ಲಿ ನಿಧಾಗತಿ ತಲೆದೋರಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
27 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭಗೊಂಡಿದ್ದು, ನಕ್ಸಲ್ ಪೀಡಿತ 12ಪ್ರದೇಶಗಳಲ್ಲಿ ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭಿಸಲಾಗಿತ್ತು. |