ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸ್ವಘೋಷಿತ ಸ್ವಾಮಿ ದಯಾನಂದ ಪಾಂಡೆ, ಅಲಿಯಾಸ್ ಸ್ವಾಮಿ ಅಮೃತಾನಂದ ವಿವಿಧ ಸನ್ನಿವೇಶ, ಸಂದರ್ಭಗಳಿಗೆ ತಕ್ಕಂತೆ ವೇಷ ಮರೆಸುತ್ತಿದ್ದರು ಎಂಬ ಅಂಶವನ್ನು ಮುಂಬೈ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಹೊರಗೆಡಹಿದೆ.ಅವಳಿ ಸ್ನಾತಕೋತ್ತರ ಪದವೀಧರನಾಗಿದ್ದು, ಟೆಕ್-ಸಾವಿಯಾಗಿದ್ದ ಸ್ವಾಮಿ, ರಾಷ್ಟ್ರೀಯ ರಕ್ಷಣಾ ಸೇವೆ(ನ್ಯಾಶನಲ್ ಡಿಫೆನ್ಸ್ ಅಕಾಡೆಮಿ)ಯಲ್ಲಿ ಸೇವೆ ಸಲ್ಲಿಸಿದ್ದರು. ವಿವಿಧ ಹೆಸರುಗಳನ್ನು ಹೊಂದಿದ್ದು, ಕಾಲಕ್ಕೆ ತಕ್ಕಂತೆ ವಿವಿಧ ವೇಷ ತೊಡುತ್ತಿದ್ದರು ಎಂದು ತನಿಖೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.ಕಾನ್ಪುರದಲ್ಲಿ ಬುಧವಾರ ಸಂಜೆ ವಶಪಡಿಸಿಕೊಳ್ಳಲಾಗಿದ್ದ ಪಾಂಡೆಯನ್ನು ಎಟಿಎಸ್ ಗುರುವಾರ ಅಧಿಕೃತವಾಗಿ ಬಂಧಿಸಿತ್ತು. ತಾನು 'ಅಭಿನವ ಭಾರತ್'ನ ಸಕ್ರಿಯ ಸದಸ್ಯನೆಂದು ಪಾಂಡೆ ಹೇಳಿದ್ದಾರೆನ್ನಲಾಗಿದೆ. ಉಗ್ರ ಹಿಂದೂ ಸಂಘಟನೆ ಅಭಿನವ್ ಭಾರತ್ ಮಾಲೆಗಾಂವ್ ಸ್ಫೋಟದ ಹಿಂದಿರುವುದಾಗಿ ತನಿಖಾಧಿಕಾರಿಗಳು ಶಂಕಿಸಿದ್ದಾರೆ.ಎಟಿಎಸ್ ಅಧಿಕಾರಿಗಳ ಪ್ರಕಾರ, ತನಗೆ ಬಂಧಿತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಜತೆ ಸಂಪರ್ಕವಿದೆ ಮತ್ತು ಮಾಲೆಗಾಂವ್ ಸ್ಫೋಟದಲ್ಲೂ ತನ್ನ ಕೈವಾಡವಿದೆ ಎಂದು ಪಾಂಡೆ ಒಪ್ಪಿಕೊಂಡಿದ್ದಾರೆ. ಅಧಿಕೃತ ಬಂಧನದ ಬಳಿಕ ಗುರುವಾರ ಸಾಯಂಕಾಲ ಸ್ವಾಮಿಯನ್ನು ಎಟಿಎಸ್ ಅಧಿಕಾರಿಗಳು ಮುಂಬೈಗೆ ಕರೆ ತಂದಿದ್ದಾರೆ. ಅತ್ಯಂತ ಸ್ನೇಹಪರ ವರ್ತನೆಯ ಸ್ವಾಮಿಯ ಬಾಯಿಬಿಡಿಸುವುದು ಆರಂಭದಲ್ಲಿ ಬಹಳ ಕಷ್ಟವಾಗಿತ್ತು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರೆ, ಆಯ್ದಮಾಹಿತಿಗಳನ್ನು ಮಾತ್ರ ಹೊರಗೆಡಹಿದ್ದು, ಅಧಿಕಾರಿಗಳಿಗೆ ಕೆಲವೇ ಮಾಹಿತಿಯನ್ನು ನೀಡಿದ್ದಾರೆನ್ನಲಾಗಿದೆ.ಬಹಳ ಸರಳ ಸ್ವಭಾವದ ಸ್ವಾಮಿ ಕೆಲವೇ ಕ್ಷಣಗಳಲ್ಲಿ ಯಾರದ್ದೇ ವಿಶ್ವಾಸಗಳಿಸುವ ಚಾಕಚಕ್ಯತೆ ಉಳ್ಳವರಾಗಿದ್ದು, ಉತ್ತಮ ಸಂವಹನ ಚಾತುರ್ಯವನ್ನು ಹೊಂದಿದವರಾಗಿದ್ದಾರೆ. ಅವರು ಯಾರಿಗೂ ಯಾವುದೇ ವಿಚಾರವನ್ನು ಮನವರಿಕೆ ಮಾಡುವ ಸಾಮರ್ಥ್ಯ ಹೊಂದಿದ್ದು, ಅತ್ಯುನ್ನತ ಶಿಕ್ಷಣ ಪಡೆದವರಾಗಿದ್ದಾರೆ.ಜಮ್ಮುವಿನ ಉನ್ನತ ಸೇನಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದ ಪಾಂಡೆ, ಸೇನೆಯ ಗುಪ್ತಚರ ದಳಕ್ಕೂ ಪ್ರವೇಶಿಸಿದ್ದರೆನ್ನಲಾಗಿದೆ. ಪುರೋಹಿತ್ 2005ರಲ್ಲಿ ಜಮ್ಮುವಿನ ಸೇನಾ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಬಂಧಿತ ಪಾಂಡೆಗೆ ವಿವಿಧ ಸಮಯ ಮತ್ತು ಸ್ಥಳಗಳಲ್ಲಿ ನಾಲ್ಕು ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಕಾನ್ಪುರದಲ್ಲಿ ದಯಾನಂದ ಪಾಂಡೆಯಾಗಿದ್ದರೆ, ಸುಧಾಕರ್ ದ್ವಿವೇದಿ ಎಂಬ ಹೆಸರಿನಲ್ಲಿ ವಾಯುಪಡೆಯಲ್ಲಿ ಐದು ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಫರಿದಾಬಾದಿನಲ್ಲಿ ಸ್ವಾಮಿ ಅಮೃತಾನಂದ ದೇವ್ ತೀರ್ಥರಾಗಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜಮ್ಮುವಿನ ಶಾರದ ಪೀಠದ ಪೀಠಾಧೀಶ ಶಂಕರಾಚಾರ್ಯರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.ಕೆಲವು ಸಮಯಗಳ ಹಿಂದೆ ಗಡ್ಡಧಾರಿಯಾಗಿದ್ದ ಸ್ವಾಮಿ, ಬಂಧನದ ವೇಳೆಗೆ ಗಡ್ಡಮೀಸೆ ಬೋಳಿಸಿದ್ದರು. ಅವರು ಸಂದರ್ಭಕ್ಕೆ ತಕ್ಕಂತೆ ನಿರಂತರ ವೇಷ ಮರೆಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಪಾಂಡೆಯ ತಂದೆ ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿದ್ದವರು. ಪಾಂಡೆ 1989ರಲ್ಲಿ ಎನ್‌ಡಿಎಗೆ ಆಯ್ಕೆಯಾಗಿದ್ದರು. ಅವರು ರಹಸ್ಯವಾಗಿ ನಾಪತ್ತೆಯಾಗುವ ಮುನ್ನ ಕಡಕ್ವಾಸ್ಲಾ ವಾಯುಪಡೆ ಕೇಂದ್ರದಲ್ಲಿ ಆರು ತಿಂಗಳಕಾಲ ತರಬೇತಿ ಪಡೆದಿದ್ದರು.ಪಾಂಡೆ ಫರಿದಾಬಾದಿನ ಚಕ್ರೇಶ್ವರ ದೇವಾಲಯದಲ್ಲಿ ತಂಗುತ್ತಿದ್ದರು. ಇವರು ವಾರಣಾಸಿಯ ಸುಮೇರು ಪೀಠಕ್ಕೆ ಭೇಟಿ ನೀಡುತ್ತಿದ್ದರು. ಈ ಸ್ಥಳಗಳಲ್ಲಿ ಅವರ ಚಟುವಟಿಕೆಗಳು ಸಂಶಯಾಸ್ಪದವಾಗಿದ್ದವು ಎಂದು ಮೂಲಗಳು ಹೇಳಿವೆ.ತಡರಾತ್ರಿಯ ತನಕ ತನ್ನ ಲ್ಯಾಪ್‌ಟಾಪ್‌ನಲ್ಲಿ ಅಂತರ್ಜಾಲದಲ್ಲಿ ಜಾಲಾಡುತ್ತಿದ್ದರು. ಇವರನ್ನು ರಾತ್ರಿಯವೇಳೆ ಹಲವಾರು ಮಂದಿ ಭೇಟಿಯಾಗುತ್ತಿದ್ದು, ಇವರಲ್ಲಿ ಉನ್ನತ ಸ್ಥಾನಮಾನದಲ್ಲಿರುವ ಮಂದಿ, ಉದ್ಯಮಿಗಳು, ಅಧಿಕಾರಿಗಳು ಸೇರಿದ್ದಾರೆನ್ನಲಾಗಿದೆ.ತಾನು ಬಂಧನಕ್ಕೀಡಾದ ತಕ್ಷಣ ಪಾಂಡೆ, ತಾನು ಜಮ್ಮುವಿನ ಶಾರದ ಸರ್ವಜ್ಞ ಪೀಟದ ಮಹಂತ ಎಂದು ಹೇಳಿಕೊಂಡಿದ್ದರು. ಆದರೆ ಬಳಿಕ ತನಿಖೆಗಳ ಪ್ರಕಾರ ಜಮ್ಮುವಿನಲ್ಲಿ ಅಂತಹ ಹೆಸರಿನ ಮಠ ಅಥವಾ ಪೀಠ ಇಲ್ಲ ಎಂದು ಹೇಳಲಾಗಿದೆ. ಪಾಂಡೆ ತನ್ನ ಲೆಕ್ಕಪರಿಶೋಧಕ ವಿ.ಕೆ.ಕಪೂರ್ ನಿವಾಸದಿಂದ ಕಾರ್ಯಾಚರಿಸುತ್ತಿದ್ದರು. ಈ ಪೀಠವು ಕಾಗದದಲ್ಲಿ ಮಾತ್ರವಿತ್ತು.ಜೇಷ್ಠ ಮಂದಿರ ಮಂಡಳಿಯಿಂದ ಸಂಪರ್ಕ ನಿರಾಕರಣೆ ಏತನ್ಮಧ್ಯೆ, ಶ್ರೀನಗರ ಮೂಲದ ಜೇಷ್ಠದೇವಿ ಪ್ರಬಂಧಕ್ ಮಂದಿರ ಮಂಡಳಿಯು, ಪಾಂಡೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಕಳೆದ ಮೂರು ವರ್ಷಗಳಿಂದ ಪಾಂಡೆ ದೇವಾಲಯಕ್ಕೆ ಭೇಟಿ ನೀಡಿಲ್ಲ ಎಂಬುದಾಗಿ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೇಷ್ಠದೇವಿ ಮಂದಿರವು ಶ್ರೀನಗರದ ಜಬರ್ವಾನ್ ಬೆಟ್ಟದ ಬುಡದಲ್ಲಿ ಸ್ಥಾಪಿತವಾಗಿದೆ.ಬಂಧಿತ ಗುರು ಪಾಂಡೆಗೆ ಉನ್ನತ ಸಂಪರ್ಕಗಳು |