ನೆಹರೂ ಜನ್ಮ ದಿನವಾದ ಶುಕ್ರವಾರ ರಾತ್ರಿ 8.31 ಭಾರತೀಯರಿಗೆ ಅಭೂತಪೂರ್ವ ಹೆಮ್ಮೆಯ ಕ್ಷಣ. ಈ ವೇಳೆಗೆ ಭಾರತವು ಸುವರ್ಣ ಇತಿಹಾಸ ಒಂದನ್ನು ದಾಖಲಿಸಿತು. ಅದು ದೇಶದ ಕೀರ್ತಿ ಪತಾಕೆ ಚಂದ್ರನ ಮೇಲೆ ಹಾರಿದ ಕ್ಷಣ!ಚಂದ್ರಯಾನ ಗಗನ ನೌಕೆಯಿಂದ ಬಿಡುಗಡೆಗೊಂಡ ಮೂನ್ ಇಂಪ್ಯಾಕ್ಟ್ ಪ್ರೋಬ್(ಎಂಐಪಿ) ಎಂಬ ಉಪಕರಣವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವಲ್ಲಿ ಭಾರತೀಯ ವಿಜ್ಞಾನಿಗಳು ಸಫಲರಾದರು. ನಾಲ್ಕೂ ಕಡೆಗಳಲ್ಲಿಯೂ ತ್ರಿವರ್ಣ ಧ್ವಜ ಚಿತ್ರಿಸಲಾಗಿರುವ 24 ಕಿಲೋ ತೂಗುವ ಮೂನ್ ಇಂಪ್ಯಾಕ್ಟ್ ಪ್ರೋಬ್ ಚಂದ್ರನ ಮೇಲೆ ಇಳಿಯುವ ಮೂಲಕ ಭಾರತದ ಧ್ವಜವು ಚಂದ್ರಗ್ರಹದಲ್ಲೂ ಪ್ರತಿಷ್ಠಾಪಿತವಾಯಿತು.ಅಮೆರಿಕ, ಮಾಜಿ ಸೋವಿಯತ್ ಒಕ್ಕೂಟ ಮತ್ತು 17 ರಾಷ್ಟ್ರಗಳನ್ನೊಳಗೊಂಡ ಯುರೋಪ್ ಬಾಹ್ಯಾಕಾಶ ಏಜೆನ್ಸಿಯು ತಮ್ಮ ಧ್ವಜಗಳನ್ನು ಈಗಾಗಲೇ ಚಂದ್ರನ ಮೇಲೆ ನೆಟ್ಟಿವೆ. ಇದೀಗ ಇವುಗಳ ಸಾಲಿಗೆ ಭಾರತವೂ ಸೇರಿದೆ. ಕ್ಷಿಪಣಿ ವಿಜ್ಞಾನಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 2004ರ ನವೆಂಬರ್‌ನಲ್ಲಿ ಉದಯ್‌ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಚಂದ್ರಗ್ರಹ ಸಂಶೋಧನಾ ಕಾರ್ಯಕಾರಿ ಸಮೂಹದ ಸಮ್ಮೇಳನದಲ್ಲಿ ನೀಡಿದ ಸಲಹೆಯ ಮೇಲೆ ಪ್ರೋಬ್‌ಅನ್ನು ಚಂದ್ರಯಾನದಲ್ಲಿ ಅಳವಡಿಸಲಾಗಿದೆ. ಅಬ್ದುಲ್ ಕಲಾಂ ಅವರು ಶುಕ್ರವಾರ ಎಂಐಪಿಯು ಉಪಗ್ರಹದಿಂದ ಪ್ರತ್ಯೇಕಿಸುವುದನ್ನು ಸಾಕ್ಷೀಕರಿಸಿದರು. ಎಂಐಪಿ ಚಂದ್ರನ ಮೇಲೆ ಇಳಿಯುವುದರೊಂದಿಗೆ ನೌಕೆಯ ಪ್ರಥಮ ಹಂತದ ಕಾರ್ಯ ಆರಂಭಗೊಂಡಿತು. ಚಂದ್ರಯಾನ ಎರಡು ವರ್ಷಗಳ ಕಾಲ ಚಂದ್ರನ ಕುರಿತು ಸಮಗ್ರ ಅಧ್ಯಯನ ನಡೆಸಲಿದೆ.ಅಕ್ಟೋಬರ್ 22ರಂದು ಶ್ರೀಹರಿಕೋಟದಿಂದ ಭಾರತೀಯ ವಿಜ್ಞಾನಿಗಳು ರೂಪಿಸಿರುವ ಪ್ರಥಮ ದೇಶೀಯ ಮಾನವ ರಹಿತ ಗಗನನೌಕೆ ಚಂದ್ರಯಾನವನ್ನು ಹಾರಿಬಿಡಲಾಗಿತ್ತು. ಭೂಮಿಯಿಂದ 3,86,000 ಕಿ.ಮೀ ಸುತ್ತಿ ಚಂದ್ರನ ಅತ್ಯಂತ ಸಮೀಪ ಅಂದರೆ 100 ಕಿ.ಮೀ ದೂರದಲ್ಲಿ ಸುತ್ತುತ್ತಿರುವ ಚಂದ್ರಯಾನ-1ರಲ್ಲಿ ತ್ರಿವರ್ಣವನ್ನು ಚಿತ್ರಿಸಿದ ಎಂಐಪಿಯನ್ನು ಅಳವಡಿಸಲಾಗಿತ್ತು.ಮೌಂಟ್ ಎವರೆಸ್ಟ್ ಮತ್ತು ಅಂಟಾರ್ಟಿಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಇದೀಗ ತ್ರಿವರ್ಣವು ಚಂದ್ರಗ್ರಹದಲ್ಲೂ ರಾರಾಜಿಸುತ್ತಿದೆ.ರಾತ್ರಿ ಗಂಟೆ 8.06 ನಿಮಿಷಕ್ಕೆ ನೌಕೆಯನ್ನು ಬಿಡುಗಡೆಗೊಳಿಸಲಾಯಿತು. ಚಂದ್ರನನ್ನು ಸೇರಲು ಎಂಐಪಿ 25 ನಿಮಿಷ ತೆಗೆದುಕೊಂಡಿತು. ಇದರಲ್ಲಿದ್ದ ಸಿಸಿಡಿ ಕ್ಯಾಮರಾ ವಿವಿಧ ಕೋನಗಳಲ್ಲಿ ಚಂದ್ರನ ಮೈಲ್ಮೈಯ ಚಿತ್ರಗಳನ್ನು ತೆಗೆಯಿತು ಸೆಕೆಂಡಿಗೆ 1.6 ವೇಗದಲ್ಲಿ ಸಾಗುವ ಸಾಮರ್ಥ್ಯವುಳ್ಳ ಎಂಐಪಿ ಚಂದ್ರಗ್ರಹದ ದಕ್ಷಿಣ ಧ್ರುವ ಶ್ಯಾಕೆಲ್‌ಟನ್ ಕ್ರೇಟರ್ ಬಳಿ ಇಳಿಯಿತು.ಯೋಜನೆಯಂತೆ ಎಂಐಪಿ ಕಾರ್ಯಾಚರಿಸುತ್ತಿರುವಂತೆ ಬೆಂಗಳೂರಿನ ಪೀಣ್ಯ ಬಳಿಯ ಇಸ್ಟ್ರಾಕ್ ಸಂಸ್ಥೆಯಲ್ಲಿ ನೆರೆದಿದ್ದ ವಿಜ್ಞಾನಿಗಳು ಆನಂದ ತುಂದಿಲರಾದರು. ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಹಾಗೂ ಅಬ್ದುಲ್ ಕಲಾಂ ಅವರು ಇಲ್ಲಿ ಉಪಸ್ಥಿತರಿದ್ದರು.ಇಸ್ರೋ ವಿಜ್ಞಾನಿಗಳ ಈ ಯಶಸ್ವೀ ಮಹಾನ್ ಕಾರ್ಯಕ್ಕೆ ವಿಶ್ವಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. |