ಉತ್ತರ ಪ್ರದೇಶದ ಕಾನ್ಪುರದಿಂದ ಮುಂಬೈ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧನಕ್ಕೀಡಾಗಿರುವ ಸ್ವಘೋಷಿತ ಸ್ವಾಮಿ ದಯಾನಂದ ಪಾಂಡೆ, ಪೊಲೀಸರು ತನಗೆ ಹಿಂಸೆ ನೀಡಿದ್ದಾರೆ ಎಂದು ನ್ಯಾಯಾಲಯದಲ್ಲಿ ದೂರಿದ್ದು, ವೈದ್ಯಕೀಯ ಪರೀಕ್ಷೆಗೆ ನ್ಯಾಯಾಲಯ ನಿರಾಕರಿಸಿದೆ.
ಪಾಂಡೆಯ ದೂರಿನಾದರಲ್ಲಿ ಪಾಂಡೆಯನ್ನು ನ್ಯಾಯಾಲಯ ಪರೀಕ್ಷಿಸಿದ್ದು, ಅವರ ದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಪಾಂಡೆಯ ಕೋರಿಕೆಯನ್ನು ತಳ್ಳಿಹಾಕಿದೆ.
ತನ್ನ ಬಂಧನದ ಬಳಿಕ ಪೊಲೀಸರು ತಮ್ಮನ್ನು ಥಳಿಸಿದರು ಎಂದು ಪಾಂಡೆ ನ್ಯಾಯಾಲಯದಲ್ಲಿ ದೂರಿದರು. ಪಾಂಡೆ ವಕೀಲರು ಮಾಡಿರುವ ವೈದ್ಯಕೀಯ ಪರೀಕ್ಷೆಯ ಮನವಿಯನ್ನು ಜಂಟಿ ಸಿವಿಲ್ ನ್ಯಾಯಾಧೀಶ ಎಚ್.ಕೆ.ಗಣತ್ರ ತಳ್ಳಿಹಾಕಿದ್ದಾರೆ.
ಮೊದಲು ಆಸ್ಪತ್ರೆಯಿಂದ ವೈದ್ಯಕೀಯ ದೃಢಪತ್ರಿಕೆ ಪಡೆದು (ಪಾಂಡೆಯನ್ನು ಮುಂಬೈಯ ಕಿಮ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು) ಬಳಿಕ ಬಂಧಿತರಿಗೆ ಹಿಂಸೆ ನೀಡುವುದು ಪೊಲೀಸರ ಮಾಮೂಲಿ ಕ್ರಮ ಎಂದ ದೂರಿದ ವಕೀಲ ಬಿ.ಡಿ.ಮೋರೆ, ಎರಡನೇ ಬಾರಿಗೆ ಪಾಂಡೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಬೇಕು ಎಂದು ನ್ಯಾಯಾಲಯವನ್ನು ವಿನಂತಿಸಿದರು.
ವಕೀಲರ ಭಿನ್ನಹದ ಬಳಿಕ, ಪಾಂಡೆಯನ್ನು ವಕೀಲರೊಂದಿಗೆ ಚೇಂಬರ್‌ಗೆ ಕರೆದ ನ್ಯಾಯಧೀಶ ಗಣತ್ರ ಅವರು ವೈಯಕ್ತಿಕವಾಗಿ ತಪಾಸಣೆ ನಡೆಸಿ ಅವರ ಮೈಮೇಲೆ ಯಾವುದೇ ಗಾಯಗಳು ಕಂಡು ಬರದ ಕಾರಣ ಮೋರೆಯ ವಿನಂತಿಯನ್ನು ತಳ್ಳಿಹಾಕಿದರು.
ಕಾನ್ಪುರದಲ್ಲಿ ಪಾಂಡೆ ಇಳಿದುಕೊಂಡಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರು, ಪಾಂಡೆಯ ವಿಮಾನ ಟಿಕೆಟ್‌ಗಳು, ಲ್ಯಾಪ್‌ಟಾಪ್, ಮೊಬೈಲುಗಳು ಮತ್ತು ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು.
ಪಾಂಡೆ ಪೊಲೀಸ್ ವಶಕ್ಕೆ ಕಾನ್ಪುರ ಮನೆಯೊಂದರಿಂದ ಬುಧವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದ ದಯಾನಂದ ಪಾಂಡೆಯನ್ನು ಎಟಿಎಸ್ ಗುರುವಾರ ಅಧಿತಕೃತವಾಗಿ ಬಂಧಿಸಿತ್ತು. ಬಳಿಕ ಮುಂಬೈಗೆ ಕರೆತಂದಿದ್ದು, ಶುಕ್ರವಾರ ನಾಸಿಕ್ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ಸ್ಫೋಟದ ಕುರಿತು ಹೆಚ್ಚಿನ ತನಿಖೆಗಾಗಿ ಪಾಂಡೆಯನ್ನು ತನ್ನ ವಶಕ್ಕೆ ನೀಡಬೇಕು ಎಂದು ಎಟಿಎಸ್ ಮವವಿ ಮಾಡಿದ್ದು, ಅಂತೆಯೇ ನ್ಯಾಯಾಲಯ ನವೆಂಬರ್ 26ರ ತನಕ ಪಾಂಡೆಯನ್ನು ಎಟಿಎಸ್ ವಶಕ್ಕೆ ನೀಡಿದೆ. |